ಕೊಕ್ಕಡ: ಉದ್ಯಮಿ ಎ.ಸಿ. ಕುರಿಯನ್ ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ನ.13ರಂದು ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಮನೆಯನ್ನು ಅಧಿಕಾರಿಗಳು ತೆರವುಗೊಳಿಸಿದ ಘಟನೆಯ ಬಳಿಕ ವೃದ್ಧ ದಂಪತಿಯ ಪುತ್ರಿ ಆರೋಪ ಮಾಡಿದ್ದು, ಇದೀಗ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಚಹಾ ತರಲು ಹೇಳಿ ಕಿರುಕುಳ: ಶಿಬಾಜೆ ಗ್ರಾಮದ ಅಕೋಟೇಜಲ್ ಎಂಬಲ್ಲಿ ಎ.ಸಿ. ಕುರಿಯನ್ ಮನೆಯಲ್ಲಿ ಮಹಿಳೆ ಹಿಂದೆ ಕೆಲಸ ಮಾಡುತ್ತಿದ್ದು, ಈ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮಹಿಳೆಯು ತನ್ನ ಪತಿಯೊಂದಿಗೆ ಕುರಿಯನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಯ ವಾಸಕ್ಕೆ ಕುರಿಯನ್ ಮನೆ ನೀಡಿದ್ದರು. ಈ ವೇಳೆ ತಾನಿದ್ದ ಕೊಠಡಿಗೆ ಚಹಾ, ತಿಂಡಿ ತರಲು ಹೇಳುತ್ತಿದ್ದ ಕುರಿಯನ್, ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. 2020ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ ಘಟನೆ ನಡೆದಿದ್ದು, ನಾಲ್ಕು ವರ್ಷಗಳ ಬಳಿಕ ಇದೀಗ ನ.14ರಂದು ದೂರು ನೀಡಲಾಗಿದೆ. ಮಾನಕ್ಕೆ ಅಂಜಿ ತಡವಾಗಿ ದೂರು ದಾಖಲಿಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಬೆದರಿಕೆ ಹಾಕಿದ್ದ ಕುರಿಯನ್: ಲೈಂಗಿಕ ಕಿರುಕುಳ ನೀಡಿದ್ದರಿಂದ ನೊಂದಿದ್ದ ಮಹಿಳೆ ಕೆಲಸ ಬಿಟ್ಟಿದ್ದರು. ಆಗ ಕುರಿಯನ್, ಈ ಭೂಮಿಯಲ್ಲಿ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು. ಮಹಿಳೆಯ ಹೆತ್ತವರು ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಸರ್ವೇ ನಂಬರ್ 123ರಲ್ಲಿ ಮನೆ ನಿರ್ಮಿಸಿ ವಾಸವಿದ್ದರು. ನ.13ರಂದು ಕಡಬ ತಹಶೀಲ್ದಾರ್, ಕಡಬ ಮೆಸ್ಕಾಂ ಎಇ, ಕಂದಾಯ ನಿರೀಕ್ಷಕರು, ಜೆಸಿಬಿ ಚಾಲಕ ಮುಂತಾದವರು ಸೇರಿ ಜೆಸಿಬಿ ಮುಖಾಂತರ ಪೊಲೀಸರ ಸಮ್ಮುಖದಲ್ಲಿ ಮನೆಯಲ್ಲಿ ಧ್ವಂಸಗೊಳಿಸಿದ್ದಾರೆ. ನನ್ನ ವಿರುದ್ಧದ ದ್ವೇಷದ ಕಾರಣ ನನ್ನ ತಂದೆ – ತಾಯಿಯ ಮನೆ ಧ್ವಂಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.