ಮಡಂತ್ಯಾರು: ಮಂಗಳೂರು ಕೆಲರಾಯ್ ಚರ್ಚ್ ಮೈದಾನದಲ್ಲಿ ನ. 9-10 ರಂದು ನಡೆದ ಮೊದಲ ಆವೃತ್ತಿಯ ‘ಪೆಪೆರೆ ಪೆಪೆ ಢುಂ’ ಬ್ರಾಸ್ ಬ್ಯಾಂಡ್ ಅಂತಿಮ ಸ್ಪರ್ಧೆಯಲ್ಲಿ ‘ರಂಗ ತರಂಗ್ ಮಡಂತ್ಯಾರ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ನ. 10ರಂದು ರಾತ್ರಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಂಗ ತರಂಗ್ ಮಡಂತ್ಯಾರ್ ಗೆಲುವಿನ ನಗೆ ಬೀರಿತು. ಒಮ್ಮೂರ್ ಚೆ ದಿಂಡೆ ಮಾನಾಯ್, ಕೆಲರಾಯ್ ಚೆ ಕಾಜುಲೆ, ನೀರ್ಮಾರ್ಚಿಂ ತಾರಾಂ, ಮತ್ತು ಟೀಮ್ ಡುಮ್ ಡುಮ್ ಬಜ್ಜೆ ಎರಡನೇ ಸ್ಥಾನವನ್ನು ಹಂಚಿಕೊಂಡವು. ಫೆ. ತಿಂಗಳ 1, 2, 3 ಮತ್ತು 4 ರಂದು ‘ಆಮಿ ಆನಿ ಆಮ್ಮಿಂ ಸಂಘಟನೆ ಏರ್ಪಡಿಸಿದ್ದ ಪ್ರಥಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ 5 ತಂಡಗಳು ಅಂತಿಮ ಹಂತದ ರೋಚಕ ಸ್ಪರ್ಧೆಗೆ ತೇರ್ಗಡೆಯಾಗಿತ್ತು. ಬ್ರಾಸ್ ಬ್ಯಾಂಡ್ ವಾದ್ಯದೊಂದಿಗೆ ನವ್ಯ ಪ್ರಯೋಗಗಳ ಅನಾವರಣಕ್ಕೆ ಈ ವೇದಿಕೆಯು ಸಾಕ್ಷಿಯಾಯಿತು. ಮೊದಲ ಬಹುಮಾನ ವಿಜೇತ ತಂಡ ರಂಗ ತರಂಗ್ ಮಡಂತ್ಯಾರ್ ಪ್ರಶಸ್ತಿ ಫಲಕದೊಂದಿಗೆ 2 ಲಕ್ಷ ರೂ. ಬಹುಮಾನ ಪಡೆಯಿತು. ನಾಲ್ಕು ರನ್ನರ್-ಅಪ್ ತಂಡಗಳಿಗೆ ತಲಾ ರೂ 1 ಲಕ್ಷದೊಂದಿಗೆ ಪ್ರಶಸ್ತಿ ನೀಡಲಾಯಿತು.
ಮುಖ್ಯ ಅತಿಥಿಯಾಗಿದ್ದ ಎನ್‌ಆರ್‌ಐ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಬಹುಮಾನದ ಮೊತ್ತವನ್ನು ಪ್ರಾಯೋಜಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ಬ್ರಾಸ್ ಬ್ಯಾಂಡ್ ಸಂಗೀತದ ಶ್ರೀಮಂತ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಮಿ ಆನಿ ಆಮ್ಮಿಂ ಸಂಘಟನೆ ‘ಪೆಪೆರೆ ಪೆಪೆ ಢುಂ’ ನಂತಹ ಕಾರ್ಯಕ್ರಮ ಆಯೋಜಿಸಿರುವುದನ್ನು ಶ್ಲಾಘಿಸಿದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಕೂಟವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ರೋಚಕ ಬ್ರಾಸ್ ಬ್ಯಾಂಡ್ ಸಂಗೀತ, ಸಾಂಪ್ರದಾಯಿಕ ಗ್ರಾಮೀಣ ನೃತ್ಯಗಳನ್ನು ಆನಂದಿಸಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ಆಹಾರ ಮಳಿಗೆಯಲ್ಲಿ ಕರಾವಳಿಯ ರುಚಿಕರವಾದ ಭಕ್ಷಗಳನ್ನು ಸವಿದರು. ಪುಸ್ತಕ ಮಳಿಗೆಗಳನ್ನು ಈ ಸಂದರ್ಭ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಯ ಉಪನಿರ್ದೇಶಕಿ ಮಿಶಾಲ್ ಸ್ವೀನಿ ಡಿ ಕೋಸ್ಟಾ, ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿಸ್ಟರ್ ರೋಸ್ ಸೆಲಿನ್, ಕೆಲರಾಯ್ ಚರ್ಚ್‌ನ ಧರ್ಮಗುರು ಫಾ. ಸಿಲ್ವೆಸ್ಟರ್ ಡಿ ಕೋಸ್ತಾ, ಕಯ್ಯಾರ್ ಚರ್ಚ್‌ನ ಧರ್ಮಗುರು ಫಾ. ವಿಶಾಲ್ ಮೋನಿಸ್, ಫಜೀರ್ ಚರ್ಚ್‌ನ ಧರ್ಮಗುರು ಫಾ. ಜೋಸೆಫ್ ಮಸ್ಕರೇನ್ಹಸ್, ಉದ್ಯಮಿ ಫಿಲಿಪ್ ಡಿಸೋಜ, ಕೆಲರಾಯ್ ಚರ್ಚ್ ಉಪಾಧ್ಯಕ್ಷ ಸಂತೋಷ್ ಡಿ’ಕೋಸ್ತಾ, ಮಂಗಳೂರು ಪ್ಯಾಸ್ಟೋಲ್ ಕೌನ್ಸಿಲ್ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಡೈಜಿವರ್ಲ್ಡ್ ಟಿವಿ ಆಡಳಿತ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೋ ಮತ್ತಿತರರು ಉಪಸ್ಥಿತರಿದ್ದರು.