ಧರ್ಮಸ್ಥಳ: ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ಸದಾ ಕಾಪಾಡುತ್ತದೆ. ಧರ್ಮಸ್ಥಳ ಸೌಂದರ್ಯ ನಗರ, ಸಂಸ್ಕೃತಿ ನಗರ ಮತ್ತು ಸೇವಾ ನಗರ. ಧರ್ಮೋ ರಕ್ಷತಿ ರಕ್ಷಿತ, ಇಡೀ ದೇಶಕ್ಕೆ ಮುಕುಟಪ್ರಾಯವಾದ ಧರ್ಮಸ್ಥಳದಲ್ಲಿ ಅಮೂಲ್ಯ ಆಸ್ತಿಯಾದ ಭಕ್ತಿ, ಸೇವೆ, ಅನುಭವ, ನಾಯಕತ್ವ, ಪ್ರತಿಷ್ಠೆ, ಪ್ರಜ್ಞಾ, ಕೀರ್ತಿ ಎಲ್ಲವೂ ಇದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಒಬ್ಬ ಸಾಧಾರಣ ವ್ಯಕ್ತಿಯಾಗಿ, ಅಸಾಧಾರಣ ಸೇವೆ, ಸಾಧನೆ ಮಾಡಿದ್ದಾರೆ. ಅವರ ದಕ್ಷ ಕಾರ್ಯ ವೈಖರಿ, ಆದರ್ಶ ನಾಯಕತ್ವ, ಸಾಮಾಜಿಕ ಸೇವಾ ಕಳಕಳಿ ಮತ್ತು ಹೃದಯ ಶ್ರೀಮಂತಿಕೆಯನ್ನು ಮನ್ನಿಸಿ ಪ್ರಧಾನಿ ನರೇಂದ್ರ ಮೋದಿಯವರೇ ಹೆಗ್ಗಡಯವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಕರ್ನಾಟಕ ರಾಜ್ಯಕ್ಕೆ ಸಂದ ಗೌರವ ಎಂದು ಕಂಚಿ ಕಾಮಕೋಟಿ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ನ. 9ರಂದು ಧರ್ಮಸ್ಥಳ ಕ್ಷೇತ್ರಕ್ಕೆ ಪುರಪ್ರವೇಶ ಮಾಡಿದಾಗ ಮುಖ್ಯ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದರು. ಹೆಗ್ಗಡೆ ಕುಟುಂಬದವರ ಅವಿಭಕ್ತ ಕುಟುಂಬ ಪದ್ಧತಿಯ ಜೀವನ ಶೈಲಿಯನ್ನು ಶ್ಲಾಘಿಸಿ ಅಭಿನಂದಿಸಿದರು. ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಸೊಗಡನ್ನು ಶ್ಲಾಘಿಸಿದ ಅವರು ವಿದ್ಯೆ, ಕಲೆಗಳು ಮತ್ತು ವಿದ್ವಾಂಸರ ರಕ್ಷಣೆಯಾಗಬೇಕು ಎಂದರು.
ಕಂಚಿ ಮಠದಲ್ಲಿ ಕೃಷಿ ಸುಭಿಕ್ಷೆಗಾಗಿ ಪ್ರತಿವರ್ಷ ಮಾಡುವ ಅನ್ನಾಭಿಷೇಕ ಸೇವೆಯನ್ನು ತಾವು ಧರ್ಮಸ್ಥಳದಲ್ಲಿ ಕೂಡಾ ಮಾಡುವುದಾಗಿ ತಿಳಿಸಿದರು. ಅಲ್ಲದೆ ಸೋಮವಾರ ಕಾರ್ತಿಕ ಪೂಜೆ, ದ್ವಾದಶಿ ಪೂಜೆ, ತ್ರಯೋದಶಿ ಪೂಜೆ ಮೊದಲಾದ ವಿಶೇಷ ಸೇವೆಗಳನ್ನು ಮಾಡುವುದಾಗಿ ತಿಳಿಸಿದರು. ಅನ್ನಪೂರ್ಣ ಛತ್ರದ ಮೇಲಂತಸ್ತಿನಲ್ಲಿ ಸುಸಜ್ಜಿತ ಆಸನ ವ್ಯವಸ್ಥೆ ಹೊಂದಿರುವ ಭೋಜನಾಲಯದ ಉದ್ಘಾಟನೆಗೆ ಹೆಗ್ಗಡೆಯವರು ಆಹ್ವಾನಿಸಿದ್ದು, ತಾವು ಇದೇ ಸಂದರ್ಭ ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದರು. ಬಹುಮುಖ ಪ್ರತಿಭೆ ಹಾಗೂ ಆದರ್ಶ ವ್ಯಕ್ತಿತ್ವ ಹೊಂದಿದ ಹೆಗ್ಗಡೆಯವರ ಹೃದಯ ಶ್ರೀಮಂತಿಕೆ ಹಾಗೂ ಸೇವಾ ಕಾಳಜಿ ಇಡೀ ದೇಶಕ್ಕೆ ಮಾದರಿಯಾಗಿದೆ. ಇತರರಿಗೂ ಸ್ಫೂರ್ತಿ, ಪ್ರೇರಣೆ ನೀಡುತ್ತವೆ ಎಂದರು. ಸರ್ವರ ಬೌದ್ಧಿಕ, ಆಧ್ಯಾತ್ಮಿಕ ಹಾಗೂ ಸಾರ್ವಕಾಲಿಕ ಭದ್ರತೆ ಮತ್ತು ವಿಕಾಸಕ್ಕಾಗಿ ಅವಕಾಶ ಕಲ್ಪಿಸಿರುವುದು ಹೆಗ್ಗಡೆಯವರಿಗೆ ವಿಶೇಷ ಮಾನ್ಯತೆ ಮತ್ತು ಗೌರವ ದೊರಕುವಂತೆ ಮಾಡಿದೆ ಎಂದು ಹೇಳಿದರು.
ಸ್ವಾಮೀಜಿಯವರು ಹೆಗ್ಗಡೆಯವರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ವಿಶೇಷವಾಗಿ ಗೌರವಿಸಿ ಆಶೀರ್ವದಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ಯಶೋವರ್ಮ ಮತ್ತು ಪೂರಣ್‌ವರ್ಮ, ಕ್ಷೇತ್ರದ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಉಜಿರೆ ಶ್ರೀ ಧ. ಮ. ವಸತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುನೀಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.