ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಚುನಾವಣೆಗೆ ವಿಘ್ನ- ಪೊಲೀಸ್ ಠಾಣೆಯ ಮೇಟ್ಟಿಲೇರಿದ ಮತದಾರರ ಪಟ್ಟಿಯ ವಿವಾದ- ಚುನಾವಣಾ ನಿಯಮಗಳ ಉಲ್ಲಂಘನೆ- ಮೂರು ಮಂದಿ ನಿರ್ದೇಶಕರಿಂದ ಚುನಾವಣಾಧಿಕಾರಿಗಳಿಗೆ ಮನವಿ

0

ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ, ಖಜಾಂಜಿ, ರಾಜ್ಯ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ನ.7 ಅಂತಿಮ ದಿನ ಕೊನೆಗೊಳ್ಳುತ್ತಿದ್ದಂತೆ ಇದೀಗ ಚುನಾವಣೆಯ ಮತದಾರರ ಪಟ್ಟಿಯ ವಿವಾದ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಬೆಳ್ತಂಗಡಿ ಸರಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಯುವ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಬಿಟ್ಟು ಹೋಗಿರುವ ವಿಷಯ ತೀವ್ರ ಗೊಂದಲಕ್ಕೆ ಕಾರಣವಾಗಿ ವಿವಾದ ಉಂಟಾಗಿತ್ತು. ಆದರೂ 22 ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷ ಗಾದಿಗೆ ಹಾಗೂ ಇತರ ಎರಡು ಸ್ಥಾನಗಳಿಗೆ ಚುನಾವಣೆ ನಡೆಸಲು ನಾಮಪತ್ರ ಸಲ್ಲಿಕೆ ದಿನಾಂಕ ಕೊನೆಗೊಳ್ಳುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ವಿಷಯ ಸ್ಫೋಟಗೊಂಡಿದ್ದು, ವಾರ್ಷಿಕ ಚಂದಾ ಪಾವತಿಸಿದರೂ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೆ, ನಿರ್ದೇಶಕರ ಸ್ಥಾನಕ್ಕೆ ನೀಡಿದ ಅರ್ಜಿಯನ್ನು ತಿರಸ್ಕರಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪುಂಜಾಲಕಟ್ಟೆ ಪ್ರೌಢ ಶಾಲಾ
ಧರಣೇಂದ್ರ ಕೆ. ಜೈನ್ ಹಾಗೂ ಆರತಿ ಕುಮಾರಿ ದೂರು ನೀಡಿದ್ದಾರೆ.

ದೂರಿನ ವಿವರ: ನಾವು ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಇದರ ಬೆಳ್ತಂಗಡಿ ಶಾಖೆಯಲ್ಲಿ ಸದಸ್ಯರಾಗಿದ್ದು, ಪ್ರತೀ ವರ್ಷ ಚಂದಾ ಹಣವನ್ನು ನಮ್ಮವೇತನದಿಂದ ಕಡಿತಗೊಳಿಸಲಾಗಿರುತ್ತದೆ. ಸದ್ರಿ ವಿಚಾರಗಳನ್ನು ತಿಳಿಸಿದಾಗ್ಯೂ ಅಧ್ಯಕ್ಷ ಜಯರಾಜ್ ಮತ್ತು ಕಾರ್ಯದರ್ಶಿ ಗಂಗಾರಾಣಿ ಅವರು ನಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ. ನಾವು ಬೆಂಗಳೂರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದವರಿಗೆ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಇ-ಮೇಲ್ ಮಾಡಿದಾಗ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಮಂಗಳೂರು ಜಿಲ್ಲಾ ಸಂಘದವರಿಗೆ ಸೂಚಿಸಿರುತ್ತಾರೆ. ಜಿಲ್ಲಾ ಸಂಘದವರು ನಮ್ಮ ಹೆಸರನ್ನು ಸೇರಿಸಿ ನಮಗೆ ಇ-ಮೇಲ್ ಮಾಡಿರುತ್ತಾರೆ. ಸದ್ರಿ ಇ-ಮೇಲ್ ಪ್ರತಿಯನ್ನು ಚುನಾವಣಾ ಅಧಿಕಾರಿಗಳಿಗೆ ನೀಡಿದ್ದರೂ 6 ಮತ್ತು 8 ರಲ್ಲಿ ರಾಜ್ಯ ಕಛೇರಿಯ ಅನುಮೋದನೆ ಇರುವುದಿಲ್ಲ ಎಂದು ಹೇಳಿ ನಾವು ನಿರ್ದೇಶಕರ ಹುದ್ದೆಗೆ ಸಲ್ಲಿಸಿದ ನಮ್ಮ ನಾಮಪತ್ರವನ್ನು ತಿರಸ್ಕರಿಸಿರುತ್ತಾರೆ.

ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವಸರವಸರವಾಗಿ ಮತದಾರರ ಪಟ್ಟಿಯನ್ನು ತಯಾರಿಸಿ, ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಕೈ ಬಿಟ್ಟು ನಾವು ವಿನಂತಿಸಿಕೊಂಡರೂ, ನಮ್ಮ ಹೆಸರನ್ನು ಸೇರಿಸದೆ ನಮ್ಮನ್ನು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿಸಿರುತ್ತಾರೆ. ತಮ್ಮವರನ್ನು ಮಾತ್ರ ನಿರ್ದೇಶಕ ಮಂಡಳಿಗೆ ಸೇರಿಸುವ ಹುನ್ನಾರದಿಂದ ನಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುತ್ತಾರೆ ಎಂದು ಆರೋಪಿಸಿದ್ದಾರೆ. ಮತದಾನದ ಬಗ್ಗೆ ಎಲ್ಲಿಯೂ ಪೇಪರ್ ನೋಟಿಫಿಕೇಷನ್ ನೀಡಿರುವುದಿಲ್ಲ. ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಿರುವುದಿಲ್ಲ. ಪ್ರೆಸ್ ರಿಪೋರ್ಟ್ ನೀಡಿರುವುದಿಲ್ಲ. ಕರಪತ್ರ ಹಂಚಿರುವುದಿಲ್ಲ. ಬ್ಯಾನರ್ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಚುನಾವಣೆ ಬಗ್ಗೆ ಪ್ರಚಾರ ನಡೆಸಿರುವುದಿಲ್ಲ. ಚುನಾವಣೆ ಬಗ್ಗೆ ಮಾಹಿತಿಗಳನ್ನು ಕೇಳಿದಾಗ ನಮಗೆ ನೀಡಿರುವುದಿಲ್ಲ. ಮಾಹಿತಿಗಳನ್ನು ನೀಡಲು ನಿರಾಕರಿಸಿರುತ್ತಾರೆ. ನಮ್ಮ ಹಾಗೆ ಇನ್ನೂ ಕೆಲವರು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವವರಿದ್ದರು. ಅವರು ತಮ್ಮವರು ಮಾತ್ರ ಆಡಳಿತ ಮಂಡಳಿಯಲ್ಲಿ ಇರಬೇಕು ಎಂದು ನಮ್ಮನ್ನು ಹಾಗೂ ಇನ್ನೂ ಉಳಿದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದೆ ನಮಗೆ ತುಂಬಾ ಅನ್ಯಾಯ ಮತ್ತು ಮೋಸ ಮಾಡಿರುತ್ತಾರೆ. ಇದರಿಂದಾಗಿ ನಮಗೆ ತುಂಬಾ ಅನ್ಯಾಯ ಮತ್ತು ಮಾನಸಿಕ ನಷ್ಟ ಉಂಟು ಮಾಡಿರುತ್ತಾರೆ. ಆದುದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹಾಗೂ ಚುನಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಚಂದಾ ಪಾವತಿ ಮಾಡಿದ ಎಲ್ಲರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ. 2024-2029ರ ನಿರ್ದೇಶಕರ ಮತ್ತು ಅಧ್ಯಕ್ಷರ ಚುನಾವಣೆಯನ್ನು ಕ್ರಮಬದ್ಧವಾಗಿ ಮುಂದಿನ ದಿನಗಳಲ್ಲಿ ನಡೆಸುವಂತೆ ಸುತ್ತೋಲೆ ಹೊರಡಿಸುವರೇ, ವಿನಂತಿಸುತ್ತೇವೆ ಮತ್ತು ನಮಗೆ ಆದ ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಚುನಾವಣಾ ನಿಯಮಗಳ ಉಲ್ಲಂಘನೆ- ಮೂರು ಮಂದಿ ನಿರ್ದೇಶಕರಿಂದ ಚುನಾವಣಾಧಿಕಾರಿಗಳಿಗೆ ಮನವಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಳ್ತಂಗಡಿ ತಾಲೂಕು ಶಾಖೆಯ 2024- 29ನೇ ಅವಧಿಯ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ವಿವಾದ ಉಂಟಾದಾಗಿ ಇಬ್ಬರು ಶಿಕ್ಷಕರು ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದರೆ, ಇದೀಗ ಚುನಾವಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿಲಾಗಿದ್ದು, ಇದರ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸಂಘದ ಮೂರು ಮಂದಿ ನಿರ್ದೇಶಕರು ಚುನಾವಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ನಿರ್ದೇಶಕರಾದ ಪ್ರಶಾಂತ್ ಡಿ.ಬಳೆಂಜ, ಪ್ರದೀಪ್ ಕುಮಾ‌ರ್, ಕೆ. ಸದಾಶಿವ ರಾವ್ ಈ ಮನವಿಯನ್ನು ನೀಡಿದ್ದಾರೆ. ಮನವಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಆದೇಶ, ನೋಟೀಸುಗಳನ್ನು ಸಂಘದ ಸದಸ್ಯರಿಗೆ ತಿಳಿಯಪಡಿಸಲು ಸೂಕ್ತ ನೋಟೀಸು ಬೋರ್ಡ್ ಇರುವುದಿಲ್ಲ. ಆದೇಶ, ನೋಟೀಸುಗಳನ್ನು ಸಂಘದ ಕಛೇರಿ ಕಟ್ಟಡದ ಗೋಡೆಗೆ ಅಂಟಿಸಿ ಪ್ರಚುರ ಪಡಿಸಲಾಗಿದೆ.

ನಾಮಪತ್ರ ತಿರಸ್ಕೃತಗೊಂಡ ಸದಸ್ಯರಿಗೆ ಯಾವ ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆಯೆಂದು ಲಿಖಿತವಾಗಿ ಈ ದಿನದವರೆಗೆ ತಿಳಿಸಿರುವುದಿಲ್ಲ ಮತ್ತು ತಿರಸ್ಕೃತಗೊಂಡವರ ಠೇವಣಿಯನ್ನು ಹಿಂತಿರುಗಿಸಿರುವುದಿಲ್ಲ. ಈ ಸಂಘದ ಅಧ್ಯಕ್ಷ, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್‌ ಹುದ್ದೆಗೆ ಸ್ಪರ್ಧಿಸುವವರಿಗೆ ಚಿಹ್ನೆಯನ್ನು ಆಯ್ಕೆ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದರಿಂದಾಗಿ ಮತ ಕೇಳಲು, ಪ್ರಚಾರ ಮಾಡಲು ತೊಂದರೆಯಾಗಿರುತ್ತದೆ. ಈ ವರೆಗೆ ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಿರುವ ಬಗ್ಗೆ ಘೋಷಣೆ ಮಾಡಿರುವುದಿಲ್ಲ. ಚುನಾವಣಾ ಪ್ರಕ್ರಿಯೆಯ ವಿವರವನ್ನು ಆರಂಭದಿಂದ ಇಲ್ಲಿಯವರೆಗೆ ಇಲಾಖಾ ಮುಖ್ಯಸ್ಥರಿಗೆ, ದೃಶ್ಯ ಮತ್ತು ಮುದ್ರಣ ಮಾಧ್ಯಮದವರಿಗೆ ಲಿಖಿತವಾಗಿ ನೀಡಿರುವುದಿಲ್ಲ.

ನ. 16 ರಂದು ನಡೆಯುವ ಚುನಾವಣಾ ಪ್ರಕ್ರಿಯೆಯ ವಿವರವನ್ನು ಲಿಖಿತವಾಗಿ ಚುನಾಯಿತ ನಿರ್ದೇಶಕರಿಗೆ ನೀಡಿರುವುದಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ, ಇದರ ಬಗ್ಗೆ ಕೂಡಲೇ ನೀಡುವಂತೆ ವಿನಂತಿಸಿದ್ದಾರೆ. ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಇದುವರೆಗೆ ಅವಿರೋಧ ಆಯ್ಕೆಗಳೇ ನಡೆದಿದ್ದು, ಇತಿಹಾಸದಲ್ಲಿ ಪೊಲೀಸ್ ಠಾಣೆಯ ಮೇಟ್ಟಿಲೇರಿದ ಪ್ರಕರಣ ನಡೆದಿರುವುದು ಇದು ಪ್ರಥಮವಾಗಿದೆ.

LEAVE A REPLY

Please enter your comment!
Please enter your name here