ಉಜಿರೆ: ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆ

0

ಉಜಿರೆ: ಉಜಿರೆ ಗ್ರಾಮ ಪಂಚಾಯತ್ ನ  2024-25ನೇ ಸಾಲಿನ  ಮಹಿಳಾ ಗ್ರಾಮ ಸಭೆಯು ನ.5ರಂದು ಪಂಚಾಯತ್ ಸುವರ್ಣ ಸೌಧ ಸಭಾಭವನದಲ್ಲಿ  ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪ್ರೇರಣಾ ಮಹಿಳಾ ಒಕ್ಕೂಟದ ಅಧ್ಯಕ್ಷೆ  ಶೀಲಾವತಿ  ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಸ್ತಾವಿಸಿದ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರು ಪ್ರೇರಣಾ ಮಹಿಳಾ ಒಕ್ಕೂಟದ ವತಿಯಿಂದ ಮಹಿಳೆಯರಿಗೆ ತರಬೇತಿ, ಕಾರ್ಯಕ್ರಮಗಳ ಮಾಹಿತಿ, ಸ್ವಉದ್ಯೋಗ ತರಬೇತಿ  ನೀಡಲಾಗುವುದು. 50ಕ್ಕೂ ಮಿಕ್ಕಿ ಸ್ವಸಹಾಯ ಸಂಘದ ಸದಸ್ಯರಿಗೆ ವ್ಯಾಪಾರ, ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಳ, ಸರಕಾರದ ಸಹಾಯಧನ, ಸಾಲ ಯೋಜನೆ, ಅನುದಾನ, ಕೇಂದ್ರ ಸರಕಾರದ  ಎನ್ ಆರ್ ಇ ಪಿ ಯೋಜನೆಯಂತೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸಕ್ಕೆ ಕೂಲಿ ನೀಡಲಾಗುವುದು. ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಮೂಲಕ ಮಹಿಳೆಯರು ಹಣ್ಣು, ಅಡಿಕೆ, ತೆಂಗು, ಕೈತೋಟ ನಿರ್ಮಾಣ, ಕೋಳಿ, ಕುರಿ, ಮೀನು ಸಾಕುವ ಯೋಜನೆಗೆ ವಿಶೇಷ ಪ್ರೋತ್ಸಾಹವಿದೆ. ಉಜಿರೆ ಗ್ರಾ.ಪಂ.ನ 34 ಸದಸ್ಯರಲ್ಲಿ 18 ಮಂದಿ ಮಹಿಳಾ ಸದಸ್ಯೆಯರಿದ್ದು ಸರಕಾರದ ಯೋಜನೆಯ ಪ್ರಯೋಜನ ಪಡೆಯಬಹುದು. ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಅಕ್ಕ ಕ್ಯಾಂಟೀನ್ ತೆರೆದು  ಮಹಿಳೆಯರು ಹೋಟೆಲ್ ಉದ್ಯಮ ಪ್ರಾರಂಭಿಸಿ ಮಿತ ದರದಲ್ಲಿ ಊಟ, ಉಪಹಾರ ಒದಗಿಸುವ ಯೋಜನೆಯಿದೆ. ಗ್ರಾಮದ ಮಹಿಳೆಯರು ಗ್ರಾಮದ ಅಭಿವೃದ್ಧಿಯ ಬಗೆಗೆ ಚಿಂತನೆ ನಡೆಸಿ, ತಾವು ಸ್ವಂತ ಕಾಲ ಮೇಲೆ ನಿಲ್ಲುವಂತಾಗಿ ಮಹಿಳಾ ಸಬಲೀಕರಣವಾಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ, ಸವಲತ್ತುಗಳನ್ನು ಮಹಿಳೆಯರು ಪಡೆದುಕೊಂಡು ಪ್ರಬುದ್ಧ ರಾಷ್ಟ್ರ ನಿರ್ಮಾಣದಲ್ಲಿ ಮುಂದಾಗಬೇಕು. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯುತ್ತಿದ್ದು ಅದನ್ನು ಸಮರ್ಪಕವಾಗಿ ವಿನಿಯೋಗಿಸಬೇಕು. ಸರಕಾರದ ಯೋಜನೆಯ ಮಾಹಿತಿ ಎಲ್ಲರಿಗೂ ತಲುಪಬೇಕು, ತರಬೇತಿ ನೀಡಲು ಗ್ರಾ.ಪಂ. ಸಿದ್ಧ  ಎಂದರು.

ಸ್ವಚ್ಛ ಗ್ರಾಮವೆಂಬ ಖ್ಯಾತಿಗೆ ಪಾತ್ರವಾದ ಉಜಿರೆ ಗ್ರಾ.ಪಂ.ನಲ್ಲಿ  ಗ್ರಾಮದ ಸ್ವಚ್ಛತೆಗೆ ವಿಶೇಷ ಪ್ರಾಧಾನ್ಯತೆ ನೀಡುತ್ತಿದ್ದರೂ  ತ್ಯಾಜ್ಯ ನಿರ್ವಹಣೆಯಲ್ಲಿ ಗಂಭೀರ ಸಮಸ್ಯೆಯೊಂದು ತಲೆದೋರಿದೆ. ಮಕ್ಕಳ ಹಾಗೂ ಮಹಿಳೆಯರ ಮುಟ್ಟಿನ ಪ್ಯಾಡ್ ನ್ನು ಎಲ್ಲೆಂದರಲ್ಲಿ ಬಿಸಾಡಿ, ತ್ಯಾಜ್ಯ ಸಂಗ್ರಹಣೆಯಲ್ಲಿ ಕಸದೊಂದಿಗೆ ಮಿಶ್ರಮಾಡಿ ಕೊಡುತ್ತಿರುವುದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಪ್ಯಾಡ್ ಗಳ ಬಳಕೆಯಿಂದ ಮಹಿಳೆಯರಿಗೆ ಗರ್ಭಕೋಶದ ತೊಂದರೆ, ಅರ್ಬುದ ರೋಗ ಹರಡುವ ಸಾಧ್ಯತೆಯಿದೆಯೆಂದು ತಜ್ಞರಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯದೊಂದಿಗೆ  ಗ್ರಾಮದ ಮಹಿಳೆಯರು ಪ್ಯಾಡ್ ನ್ನು ತ್ಯಾಜ್ಯ ಸಂಗ್ರಹಣೆಯಲ್ಲಿ ಕಳಿಸದೆ ಪರ್ಯಾಯ ಯೋಜನೆ ರೂಪಿಸಿಕೊಳ್ಳಬೇಕು. ಅದೇ ರೀತಿ ಮುಂದುವರಿದಲ್ಲಿ ಕ್ರಮೇಣ ಪಂಚಾಯತ್ ವತಿಯಿಂದ ದಂಡ ವಿಧಿಸಲಾಗುವುದು ಎಂದರು.

ಸ್ವಚ್ಛತಾ ಸಿಬಂದಿ ಶುಭಶ್ರೀ ಮಾಹಿತಿ ನೀಡಿ ಮರು ಬಳಸಬಹುದಾದ ಬೆನ್ಸೋಲ್ ಪ್ಯಾಡ್ ಪ್ರತಿದಿನ 6 ಗಂಟೆ ಬಳಸಿ, ಸ್ವಚ್ಛಗೊಳಿಸಿ, 6 ವರ್ಷಗಳ ಕಾಲ ಬಳಸಬಹುದಾದ ಪ್ಯಾಡ್ ಗೆ ರೂ. 650ಕ್ಕೆ ದೊರೆಯುವುದು. ಇದರಿಂದ ಅರೋಗ್ಯಕ್ಕೆ ಯಾವುದೇ ತೊಂದರೆಯಿರುವುದಿಲ್ಲ. ಇದನ್ನು ಎಲ್ಲರೂ ಬಳಸಿ ಪರಿಸರಕ್ಕೆ ಮಾರಕವಾಗದಂತೆ ಉಪಯೋಗಿಸಬಹುದು ಎಂದರು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿಯೋಜನೆಯ  ಬಗೆಗೆ ವಿನುತಾ ಮಾಹಿತಿ ನೀಡಿ ಮಹಿಳೆಯರು ಸ್ವಉದ್ಯೋಗಿಗಳಾಗಿ ಅಡಿಕೆ, ಬಾವಿ ತೊಡುವುದು, ಎರೆಹುಳು ಗೊಬ್ಬರ, ತೆಂಗಿನ ತೋಟ ನಿರ್ಮಾಣ, ಪಶು ಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಣೆ, ಕೃಷಿಯಲ್ಲಿ ರಂಬುಟಾನ್, ಡ್ರಾಗನ್ ಫ್ರೂಟ್, ಕೊಕ್ಕೋ, ಪೇರಳೆ ಕೃಷಿ, ಗೊಬ್ಬರ ಗುಂಡಿ ನಿರ್ಮಿಸಿ ದೈನಿಕ ವೇತನ ರೂ.349 ಪಡೆಯಬಹುದು. ದುಡಿಯುವ ಮಹಿಳೆಯರ 6 ತಿಂಗಳಿಂದ 3 ವರ್ಷದವರೆಗಿನ ಮಕ್ಕಳ ಆರೈಕೆ ನೋಡಿಕೊಳ್ಳಲು ಪಂಚಾಯತ್ ವತಿಯಿಂದ ಕೂಸಿನ ಮನೆ ವ್ಯವಸ್ಥೆಯಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್  ಸರಕಾರದ ಯೋಜನೆ, ಅನುದಾನವನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡು ಸ್ವಉದ್ಯೋಗದಿಂದ ಸ್ವಾವಲಂಬಿಗಳಾಗಿ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಸಂತೃಪ್ತ ಜೀವನ ನಡೆಸಬಹುದು. ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ  ಮಹಿಳೆಯರು ಕೈಜೋಡಿಸಿ  ಸ್ವಚ್ಛ, ಸುಂದರ ನಗರದ  ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿ ಎಂದು ಮನವಿ ಮಾಡಿಕೊಂಡರು.  ಉಪಾಧ್ಯಕ್ಷ ರವಿಕುಮಾರ್ ಬರಮೇಲು ಮಾತನಾಡಿದರು. ಕಾರ್ಯದರ್ಶಿ ಶ್ರವಣಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

p>

LEAVE A REPLY

Please enter your comment!
Please enter your name here