ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಕುತ್ಲೂರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.29ರಂದು ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು.
ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಊಟದ ತಟ್ಟೆ ವಿತರಿಸಲಾಯಿತು. ಸಮೃದ್ದಿ ಎಂಟರ್ಪ್ರೈಸಸ್ ಮಾಲಕ ಕಾಲೀಂ ಶಾಲೆಗೆ ಕಪಾಟು ಹಸ್ತಾಂತರಿಸಿದರು. ಶಾಲಾ ವಿದ್ಯಾರ್ಥಿಗಳು ಹಣತೆಯೊಂದಿಗೆ ದೀಪಾವಳಿ ಆಚರಿಸಿದರು.
ಕುತ್ಲೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ, ಪತ್ರಕರ್ತರು ಗ್ರಾಮವಾಸ್ತವ್ಯ ಮಾಡಿದ ಬಳಿಕ ಈ ಗ್ರಾಮ ಹಾಗೂ ಶಾಲೆ ಬಹಳ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು. ರಾಜ ಕೇಸರಿ ಟ್ರಸ್ಟ್ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ಈ ಶಾಲೆ ಎಲ್ಲ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ರಾಜ ಕೇಸರಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ದೀಪಕ್ ಜಿ., ಪದಾಧಿಕಾರಿಗಳಾದ ಶ್ರೀನಿವಾಸ್ ಕುಲಾಲ್, ಲಕ್ಷ್ಮಣ ಕೋಟ್ಯಾನ್, ವಿನೀತ್ ಬಂಗೇರ, ಸುಜಾತಾ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಶಾಲಾ ಮುಖ್ಯ ಗುರು ಜ್ಯೋತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್, ಗ್ರಾಮ ಪಂಚಾಯತ್ ಸದಸ್ಯರಾದ ಮೀನಾ, ಪ್ರೇಮಾ ಉಪಸ್ಥಿತರಿದ್ದರು. ರೂಪಾ ಕುಮಾರಿ ವಂದಿಸಿದರು. ರಾಜಾಕಾಳಪ್ಪ ನಿರೂಪಿಸಿದರು.