ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗ್ರಾಮ ಸಮಿತಿ ಉಜಿರೆ ಇದರ ವಾರ್ಷಿಕ ಮಹಾಸಭೆ ಅ. 27ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಸುರೇಶ್ ಗೌಡ ಬೈಲು ನೆರವೇರಿಸಿದರು. ತುಳುನಾಡ ಶೈಲಿಯಲ್ಲಿ ಗೋ ಪೂಜೆ ನಡೆಸಿ ನಂತರ ಉದ್ಘಾಟನೆ ನಡೆಸಿದ್ದು ವಿಶೇಷವಾಗಿತ್ತು.
ಸಭಾಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಉಜಿರೆ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ, ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ತಾಲೂಕು ಯುವ ವೇದಿಕೆಯ ಕಾರ್ಯದರ್ಶಿ ಸುರೇಶ್ ಗೌಡ ಕೌಡಂಗೆ, ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ್ ಗೌಡ ಭಾಗವಹಿಸಿದ್ದರು.
ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ವಿ. ಕೆ. ವಿಟ್ಲ ಇವರನ್ನು ಸನ್ಮಾನಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಗ್ರಾಮ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ ಸ್ವಾಗತಿಸಿದರು, ಕಾರ್ಯದರ್ಶಿ ಶೇಖರ್ ಗೌಡ ವಿದ್ಯಾನಗರ ವರದಿ ವಾಚಿಸಿದರು, ಕೋಶಾಧಿಕಾರಿ ಬಾಲಕೃಷ್ಣ ಕೊರಮೇರು ಲೆಕ್ಕಪತ್ರ ಮಂಡಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಚಂದ್ರಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪದಾಧಿಕಾರಿಗಳು, ವಿವಿಧ ಗ್ರಾಮ ಸಮಿತಿಯ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದರು.
ಮಲೆಬೆಟ್ಟು ವಲಯದ ಸದಸ್ಯ ಗೋಪಾಲಕೃಷ್ಣ ಬಾಜಿಮಾರು, ಲಕ್ಷ್ಮಣ ಗೌಡ, ಧರ್ಣಪ್ಪ ಗೌಡ, ಹರೀಶ್ ಗೌಡ ತಂಡದಿಂದ ವಿಶೇಷ ಚೆಂಡೆ ವಾದನ ಸಮಾರಂಭಕ್ಕೆ ಕಳೆ ತಂದಿತು. ಯುವ ವೇದಿಕೆ ಅಧ್ಯಕ್ಷ ಸೋಮಶೇಖರ್ ಮಾಚಾರು ವಂದಿಸಿದರು. ಉಜಿರೆ ಗ್ರಾಮದ ಹೆಚ್ಚಿನ ಸ್ವಜಾತಿ ಭಾಂದವರು ಸಮಾರಂಭದಲ್ಲಿ ಭಾಗವಹಿಸಿದ್ದರು.