ಬೆಳ್ತಂಗಡಿ: ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಡ್ಲೆ, ಪೆರ್ಲ, ಕೊಕ್ಕಡ ವಲಯ ಮಟ್ಟದ ಕ್ರೀಡಾಕೂಟವನ್ನು ಅ.22ರಂದು ಆಯೋಜಿಸಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನವರ್ಮ ಜೈನ್ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾ ಧ್ವಜಾರೋಹಣ ಕಾರ್ಯಕ್ರಮವನ್ನು ಸ್ಥಳೀಯ ಪ್ರಗತಿಪರ ಕೃಷಿಕ ಚಿತ್ತರಂಜನ್ ಜೈನ್ ನೆರವೇರಿಸಿದರು. ವೇದಿಕೆಯಲ್ಲಿ ನಿಡ್ಲೆ ವಲಯದ ಸಿ.ಆರ್.ಪಿ ಪ್ರತಿಮಾ, ನಿವೃತ್ತ ಮುಖ್ಯಶಿಕ್ಷಕ ಜಿ. ಶ್ರೀಧರನ್ ನಾಯರ್, ಪುದುವೆಟ್ಟು ಪಂಚಾಯತ್ ಅಧ್ಯಕ್ಷ ಅನಿತಾ, ಬೊಳ್ಮನಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಂಗನಾಥ ಫಲತ್ತೆರಿ, ವಲಯ ಸಂಘಟಕ ವಿಲ್ಫ್ರೈಡ್ ಪಿಂಟೋ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಟಿಕ್ಕಾ ಸಾಹೇಬ್, ವನದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ಗೌಡ, ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ರತ್ನವರ್ಮಜೈನ್ ಇಂತಹ ಕ್ರೀಡಾಕೂಟದ ಆಯೋಜನೆಯಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿ ಆಗಲು ಸಾಧ್ಯ ಎಂದು ಅಭಿಪ್ರಾಯಪಟ್ಟು, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಪ್ರತಿಮಾ ಅವರು ಮಾತನಾಡಿ ಕ್ರೀಡಾ ಸ್ಪೂರ್ತಿಯಿಂದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಕ್ರೀಡೆಯನ್ನು ಆಡಿ ತಮ್ಮಲಿರುವ ಪ್ರತಿಭೆಯನ್ನು ಹೊರಹಾಕಬೇಕು ಎಂದು ತಿಳಿಸಿದರು. ವಲಯ ಸಂಘಟಕ ವಿಲ್ಫ್ರೈಡ್ ಪಿಂಟೋ ಕ್ರೀಡಾ ನಿಯಮಗಳನ್ನು ಸೇರಿರುವ ಎಲ್ಲಾ ಕ್ರೀಡಾಪಟುಗಳಿಗೆ ತಿಳಿಸಿದರು. ಶಾಲಾ ಮುಖ್ಯಶಿಕ್ಷಕ ಶೀನಪ್ಪ ಗೌಡ ಕ್ರೀಡಾಕೂಟಕ್ಕೆ ಆಗಮಿಸಿದ ಎಲ್ಲರನ್ನು ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು.
ಕ್ರೀಡಾಕೂಟಕ್ಕೆ ವನದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ತಂದು ಕ್ರೀಡಾಂಗಣಕ್ಕೆ ಪ್ರವೇಶಿಸಲಾಯಿತು. ಶಾಲಾ ವಿದ್ಯಾರ್ಥಿ ಹರ್ಷಿತ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕ್ರೀಡಾಕೂಟದಲ್ಲಿ ಶಾಲಾ ದೈಹಿಕಶಿಕ್ಷಣ ಶಿಕ್ಷಕಿ ಶೀಲಾ ಎನ್. ಧನ್ಯವಾದಗೈದು, ನಿಶಾಂತ್ ಕುಮಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಊರವರು, ಹಳೆ ವಿದ್ಯಾರ್ಥಿಗಳು, ಪೋಷಕರು, ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಸಹಕರಿಸಿದರು.
ಸಮಾರೋಪ: ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸೋಮಶೇಖರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸ್ಥಳೀಯರಾದ ಜೈನ್, ನಿವೃತ್ತ ಮುಖ್ಯ ಶಿಕ್ಷಕ ಜಿ. ಶ್ರೀಧರನ್ ನಾಯರ್, ಪುದುವೆಟ್ಟು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಯಶವಂತ ಗೌಡ, ವಲಯ ಸಂಘಟಕ ವಿಲ್ಫ್ರೆಡ್ ಪಿಂಟೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಟಿಕ್ಕಾ ಸಾಹೇಬ್, ಸಾರ್ವಜನಿಕ ಅಷ್ಟಮಿ ಸಮಿತಿಯ ಅಧ್ಯಕ್ಷ ದಿವಾಕರ ಗೌಡ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಗುಂಪಕಲ್ಲು, ಆಶಾ ಕಾರ್ಯಕರ್ತೆ ಹರಿಣಾಕ್ಷಿ, ಶಾಲಾ ಮುಖ್ಯ ಶಿಕ್ಷಕ ಶೀನಪ್ಪಗೌಡ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸೋಮಶೇಖರ್ ಅವರು, ಕ್ರೀಡಾಕೂಟದಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯ ದ್ವಿಗುಣವಾಗುತ್ತದೆ, ಕ್ರೀಡೆಯಿಂದ ಮಗುವಿನ ಶಾರೀರಿಕ ಬೆಳವಣಿಗೆಯಾಗುತ್ತದೆ ಹಾಗೂ ಕ್ರೀಡಾಕೂಟಕ್ಕೆ ಊರಿನ ಕ್ರೀಡಾಭಿಮಾನಿಗಳ ಪ್ರೋತ್ಸಾಹವನ್ನು ಮೆಚ್ಚಿ ಅಭಿನಂದಿಸಿದರು. ನಂತರ ಮಾತನಾಡಿದ ಶೀನಪ್ಪಗೌಡ ಈ ಕ್ರೀಡಾಕೂಟದ ಯಶಸ್ವಿಗಾಗಿ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸುಜಾತಾ ಸ್ವಾಗತಿಸಿ, ನಿಶಾಂತ್ ಕುಮಾರ್ ಧನ್ಯಾವಾದಗೈದು, ಪುಷ್ಪಲತಾ ನಿರೂಪಿಸಿದರು.