ಕನ್ಯಾಡಿ: ಸೇವಾಭಾರತಿ ಕನ್ಯಾಡಿಯು ಕಳೆದ 6 ವರ್ಷಗಳಿಂದ ಜಿಲ್ಲೆಗಳ ವ್ಯಾಪ್ತಿಗಳಲ್ಲಿ 700ಕ್ಕೂ ಹೆಚ್ಚು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನವನ್ನು ನೀಡುತ್ತಾ ಬಂದಿದ್ದು. ಇದರಲ್ಲಿ 100 ಕ್ಕೂ ಹೆಚ್ಚು ಮಂದಿ ಒತ್ತಡ ಗಾಯದಿಂದ ಬಳಲುತ್ತಿದ್ದು ಇದರ ನಿರ್ವಹಣೆಯನ್ನು ಮಾಡುವುದು ಅತಿ ಕಷ್ಟ. ಒತ್ತಡ ಗಾಯಗಳಿರುವಂತ ವ್ಯಕ್ತಿಗಳು ಪುನಶ್ಚೇತನವನ್ನು ಪಡೆದುಕೊಳ್ಳುವುದು ಸಹ ಕಷ್ಟದ ಸಂಗತಿ.
ಈ ನಿಟ್ಟಿನಲ್ಲಿ ಬೈಂದೂರಿನ ಪಡುವರಿ ಗ್ರಾಮದಲ್ಲಿರುವ ಹೇನಬೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 5 ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿಯ ಕೊರತೆಯಿಂದ ಮುಚ್ಚಿದ್ದು. ಈ ಶಾಲೆಯನ್ನು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಒತ್ತಡಗಾಯ ನಿರ್ವಹಣೆ ಮತ್ತು ಪುನಶ್ಚೇತನ ಕೇಂದ್ರವನ್ನಾಗಿ ಮಾಡುವ ಸಲುವಾಗಿ ಶಿಕ್ಷಣ ಇಲಾಖೆ ಮತ್ತು ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ನಡುವೆ ಒಡಂಬಡಿಕೆ ವಿನಿಮಯ ನಡೆಯಿತು. ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾ ಸೇತು ಯೋಜನೆಯಡಿಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ಆದ ಈ ಕಾರ್ಯಕ್ರಮದಲ್ಲಿ ಒಡಂಬಡಿಕೆ ಪತ್ರವನ್ನು ಬಿಇಒ ಆಫೀಸ್ ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ ಮತ್ತು ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಬೈಂದೂರಿನ ಸಮೃದ್ಧ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಶೆಟ್ಟಿ , ಉದ್ಯಮಿ ಪಾಂಡುರಂಗ ಪಡಿಯಾರ್, ಸಾಮಾಜಿಕ ಕಾರ್ಯಕರ್ತ ದಿನಕರ್, ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ್ ಪೂಜಾರಿ, ಹಾಗೂ ಸೇವಾಭಾರತಿಯ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಉಪಸ್ಥಿತರಿದ್ದರು.
ಮುಂದಿನ ತಿಂಗಳುಗಳಲ್ಲಿ ಈ ಯೋಜನೆಯು ಕಾರ್ಯಾಚರಿಸಲ್ಪಡುತ್ತದೆ ಮತ್ತು ಸುತ್ತಮುತ್ತಲ ಜಿಲ್ಲೆಯಲ್ಲಿ ಒತ್ತಡ ಗಾಯಗಳಿರುವಂತಹ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಈ ಕೇಂದ್ರ ವರದಾನವಾಗಲಿದೆ ಹಾಗೂ ಅವರ ಜೀವನ ಕ್ರಮ ಸುಗಮವಾಗಲಿದೆ.