ಕಳಿಯ: ಗೋವಿಂದೂರು ಫ್ರೆಂಡ್ಸ್ ಪ್ರಯಾಣಿಕರ ನೂತನ ಬಸ್ ತಂಗುದಾಣ ಉದ್ಘಾಟನೆ ಅ.13ರಂದು ನಡೆಯಿತು. 2ತಿಂಗಳ ಹಿಂದೆ 10 ಮಂದಿಯನ್ನು ಒಳಗೊಂಡ ಸರ್ವಧರ್ಮೀಯ ಗೋವಿಂದೂರು ಫ್ರೆಂಡ್ಸ್ ತಂಡವು ಚಾಲ್ತಿಗೆ ಬಂದು, ತಮ್ಮ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ 80 ಸಾವಿರ ರೂಪಾಯಿ ವೆಚ್ಚದಲ್ಲಿ ನೂತನ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದಾರೆ.
ಉಪ್ಪಿನಂಗಡಿ-ಗುರುವಾಯನಕೆರೆಯ ರಾಜ್ಯ ಹೆದ್ದಾರಿಯ ಗೋವಿಂದೂರು ಎಂಬಲ್ಲಿ ಸಾಕಷ್ಟು ಪ್ರಯಾಣಿಕರು ಬಸ್‌ಗಾಗಿ ರಸ್ತೆ ಬದಿ ಕಾಯುತ್ತಿರುತ್ತಾರೆ. ಅನಾರೋಗ್ಯ ಪೀಡಿತರು, ಹಿರಿಯರಿಗೆ ದಣಿವು ನೀಗಿಸಲು ತಮ್ಮ ಊರಿನಲ್ಲಿ ಸಮರ್ಪಕವಾಗಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಹೆಜ್ಜೆ ಇಟ್ಟವರು ಗೋವಿಂದೂರು ಫ್ರೆಂಡ್ಸ್. ಸುಮಾರು 90 ದಿನಗಳ ಕೆಲಸ ನಡೆದಿದ್ದು, ತಮ್ಮ ಬಿಡುವಿನ ಸಂದರ್ಭದಲ್ಲಿ ಜೊತೆಗೂಡಿ ಶ್ರಮಿಸಿದ್ದಾರೆ. ತಂಡದಲ್ಲಿರುವವರು ಚಾಲಕರಾಗಿ, ಗಾರೆ ಕೆಲಸ ಹಾಗೂ ಇನ್ನಿತರ ವರ್ಗದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೇರುಕಟ್ಟೆ ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ಬಸ್ ತಂಗುದಾಣವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕರ, ಪಂಚಾಯತ್ ಸದಸ್ಯ ವಿಜಯ ಕುಮಾರ್ ಕಲಾಯಿತೊಟ್ಟು, ಲತೀಫ್ ಪರೀಮ, ಉದ್ಯಮಿ ಹಮೀರ್ ಕಡ್ತಿಕಾಯರ್, ಮನೋಜ್ ರೈ ಉಪಸ್ಥಿತರಿದ್ದು, ಶುಭಹಾರೈಸಿದರು. ಹಕೀಂ ಗೋವಿಂದೂರು, ದಿನೇಶ್ ಗೋವಿಂದೂರು, ಮಹೇಶ್ ರೈ ಜಾರಿಗೆಬೈಲು, ಅಜೀಜ್ ಗೋವಿಂದೂರು, ಅವೀನ್ಯ್ ಕೊಲ್ಲೋಟ್ಟು, ಲತೀಫ್ ಜಾರಿಗೆಬೈಲು, ಮೋನು ಗೋವಿಂದೂರು, ಗೋವಿಂದೂರು ಫ್ರೆಂಡ್ಸ್ ನ ರಾಜೇಶ್, ಯೋಗೀಶ್, ಮನೋಜ್, ಮಹೇಶ್ ಮುಗುಳಿ, ಕಾರ್ತಿಕ್, ಪ್ರವೀಣ್, ದಯಾನಂದ, ಚಂದ್ರ ಜಾರಿಗೆ ಬೈಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.