ಕೊಕ್ಕಡ: ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಎನ್ ಎಸ್ ಎಸ್ ವಾರ್ಷಿಕ ಶಿಬಿರವು ಕೊಕ್ಕಡದ ಸರಕಾರಿ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ನೆರವೇರಿತು. ಶಿಬಿರದ ಸಮಾರೋಪ ಸಮಾರಂಭ ಅ.10 ರಂದು ನಡೆಯಿತು.
ಅತಿಥಿಗಳಾದ ನೆಲ್ಯಾಡಿ ವಿ.ವಿ ಘಟಕ ಕಾಲೇಜಿನ ಸಂಯೋಜಕ ಡಾ.ಸುರೇಶ್ ಮಾತನಾಡಿ “ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆಯನ್ನು ಮಾಡುವುದರೊಂದಿಗೆ, ಜೀವನಕ್ಕೆ ಬೇಕಾದ ಕೌಶಲಗಳನ್ನು ಕಲಿಯುವಂಥವರಾಗಬೇಕು. ಮುಂದೆ ಸಮಾಜವನ್ನು ಮುನ್ನಡೆಸುವ ಸತ್ಪ್ರಜೆಗಳನ್ನು ರಾಷ್ಟ್ರೀಯ ಸೇವಾ ಯೋಜನೆಯು ಇಂಥಹ ಶಿಬಿರಗಳ ಮೂಲಕ ನಿರ್ಮಾಣ ಮಾಡುತ್ತಿದೆ. ಸ್ವಯಂಸೇವಕರಲ್ಲಿ ಶಿಸ್ತು, ಸಮಯ ಪಾಲನೆ, ಸೇವಾ ಮನೋಭಾವ, ಅತಿಥಿ ಸತ್ಕಾರ, ಪರಿಸರ ಸಂರಕ್ಷಣೆ, ವಿವಿಧ ಸಂಪನ್ಮೂಲಗಳ ಮಿತ ಬಳಕೆ, ನಾಯಕತ್ವಗುಣ, ಸಂವಹನ ಕಲೆ, ಇತ್ಯಾದಿ ಗುಣಗಳನ್ನು ಬೆಳೆಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಲಿಯಾಸ್ ಎಂ.ಕೆ ಅವರು ಮಾತನಾಡುತ್ತಾ “ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಸಮಾನತೆ, ಸಹಬಾಳ್ವೆಯನ್ನು ಕಲಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಎಲ್ಲರೂ ಒಂದೇ ಮನೆಯವರು ಎಂಬಂಥಹ ಭಾವನೆಯನ್ನು ಮೂಡಿಸುತ್ತದೆ. ಶಿಬಿರ ಮುಗಿಸಿ ಮನೆಗೆ ತೆರಳಲು ವಿದ್ಯಾರ್ಥಿಗಳು ಹಿಂದೇಟು ಹಾಕುವಷ್ಟರ ಮಟ್ಟಿಗೆ ಅವರಲ್ಲಿ ಬೆಸುಗೆಯನ್ನು ಈ ಶಿಬಿರ ಮಾಡಿದೆ. ಶಿಬಿರದ ಸಂತೋಷದ ಕ್ಷಣದ ಗುಂಗಿನಿಂದ ಹೊರಬಂದು ಪರೀಕ್ಷೆ, ತರಗತಿ, ಭವಿಷ್ಯದ ಕಡೆಗೆ ಗಮನ ಕೊಡಬೇಕಾದದ್ದು ವಿದ್ಯಾರ್ಥಿಗಳ ಈಗಿನ ಕರ್ತವ್ಯ. ಏಕೆಂದರೆ ಜೀವನವೇ ಹೀಗೆ ಕ್ಷಣ ಕ್ಷಣವೂ ನವ ಸನ್ನಿವೇಶಗಳಿಗೆ ಹೊಂದಿಕೊಂಡು ಬದುಕುವಂಥದ್ದು ಮಾನವರ ಅನಿವಾರ್ಯತೆ. ಎನ್.ಎಸ್.ಎಸ್ ಈ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ” ಎಂದು ಹೇಳಿದರು.
ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜೋಳಿ, ಕೊಕ್ಕಡ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಬೀನಾ ಸಾಗರ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮ್ಮರ್ ಬೈಲಂಗಡಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಾಮೋದರ ಗೌಡ ಸಂದರ್ಭೋಚಿತವಾಗಿ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕ ಆಶ್ಲೇಷ, ನಾಯಕಿ ದೀಕ್ಷಾ ಉಪಸ್ಥಿತರಿದ್ದರು.
ಸನ್ಮಾನ: ಶಿಬಿರದ ಯಶಸ್ವಿಗೆ ಸಹಕರಿಸಿದ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್, ಶಿಬಿರಾಧಿಕಾರಿ ವಿಶ್ವನಾಥ ಶೆಟ್ಟಿ ಕೆ., ಸಹಶಿಬಿರಾಧಿಕಾರಿಗಳಾದ ಮಧು ಎ.ಜೆ., ಜೆಸಿಂತಾ ಕೆ.ಜೆ., ಗೀತಾ ಪಿ.ಬಿ. ಅವರುಗಳನ್ನು ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ -ರಕ್ಷಕ ಸಂಘ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರಶಸ್ತಿ: ಅತ್ಯುತ್ತಮ ಶಿಬಿರಾರ್ಥಿಯಾಗಿ ತನುಷ್ ಮತ್ತು ಕೀರ್ತಿ, ಉತ್ತಮ ಕೆಲಸಗಾರರಾಗಿ ದೇವಿಪ್ರಸಾದ್, ಸ್ಪಂದನಾ, ಉತ್ತಮ ಸ್ಪಂದನೆಗಾಗಿ ಆಶ್ಲೇಷ, ದೀಕ್ಷಿತ ಅವರಿಗೆ ಬಹುಮಾನವನ್ನು ನೀಡಲಾಯಿತು.
ಶಿಬಿರಾರ್ಥಿಗಳಾದ ದೀಕ್ಷಾ, ಅನುಷಾ, ತನುಷ್ ಶಿಬಿರದ ಅನಿಸಿಕೆಯನ್ನು ತಿಳಿಸಿದರು. ಶಿಬಿರಾರ್ಥಿ ಗೋಪಿಕಾ ವರದಿ ವಾಚಿಸಿದರು. ಸಹಶಿಬಿರಾಧಿಕಾರಿ ಮಧು ಎ.ಜೆ. ಸ್ವಾಗತಿಸಿದರು. ಶಿಬಿರಾಧಿಕಾರಿ ವಿಶ್ವನಾಥ್ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.