ಬೆಳ್ತಂಗಡಿ: ಅಹಿಂಸಾ ತತ್ವದ ಸಂತ ಮಹಾತ್ಮ ಗಾಂಧೀಜಿ. ನಮ್ಮ ಮಾತು, ಕೃತಿ, ನಡೆ, ನುಡಿಗಳು ಶುಭ್ರತೆಯಿಂದ ಕೂಡಿರಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವ ಕರ್ತವ್ಯ ನಾಗರಿಕರಾದ ನಮ್ಮ ಮೇಲೆ ಇದೆ. ಗಾಂಧೀಜಿಯ ಮಾತು ನಡೆ, ನುಡಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ತ್ಯಾಗ ನಮಗೆ ಆದರ್ಶ ಎಂದು ವಕೀಲ ಧನಂಜಯ್ ರಾವ್ ಹೇಳಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್, ಬೆಳ್ತಂಗಡಿ ಲಯನ್ಸ್ ಕ್ಲಬ್, ವರ್ತಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆ ಪ್ರಾಂಗಣದಲ್ಲಿ ಅ.2ರಂದು ನಡೆದ ಗಾಂಧಿ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಸ್ಟಿಕ್ಕರ್ ಬಿಡುಗಡೆಗೊಳಿಸಿ ಮಾತನಾಡಿದರು.
ಪ.ಪಂ.ಮುಖ್ಯಾಧಿಕಾರಿ ರಾಜೇಶ್ ಕೆ. ಮಾತನಾಡಿ, ನಮ್ಮ ಪರಿಸರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಪರಿಸರದ ಕುರಿತು ಕಾಳಜಿ ತೋರಬೇಕು. ಬೆಳ್ತಂಗಡಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಚೀಲವನ್ನು ಇಂದಿನಿಂದ ಸಂರ್ಪೂಣವಾಗಿ ನಿಷೇಧಿಸಲಾಗಿದೆ. ನೀಡುವರಿಗೆ ದಂಡ ವಿಧಿಸಲಾಗುತ್ತದೆ. ಅದನ್ನು ಮೀರಿದರೆ ಉದ್ಯಮ ಪರವಾನಗಿ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗುವುದು. ಬೆಳ್ತಂಗಡಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಗಿಡ ನೆಡುವುದು ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೋ, ಲಯನ್ಸ್ ಕ್ಲಬ್ಸ್ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಸೀನಿಯರ್ ಮಂಜುಶ್ರೀ ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜ, ವರ್ತಕರ ಸಂಘದ ಉಪಾಧ್ಯಕ್ಷ ಶಶಿಧರ್ ಪೈ, ಯಶವಂತ್ ಪಟವರ್ಧನ್, ರಾಜಕೇಸರಿ ಸ್ಥಾಪಕ ಅಧ್ಯಕ್ಷ ದೀಪಕ್ ಜಿ, ಪ.ಪಂ. ಇಂಜಿನಿಯರ್ ಮಹಾವೀರ ಅರಿಗ, ವರ್ತಕರು, ಪ.ಪಂ. ಸಿಬ್ಬಂದಿ, ಮತ್ತಿತರರುಉಪಸ್ಥಿತರಿದ್ದರು.
ವಸಂತ ಶೆಟ್ಟಿ ಶ್ರದ್ಧಾ ನಿರೂಪಿಸಿದರು.