ಗುರುವಾಯನಕೆರೆ: ವಿದ್ವತ್ ಪದವಿ ಪೂರ್ವ ಕಾಲೇಜಿನಲ್ಲಿ “ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ- ಸಾಧಕರೊಂದಿಗೆ ಸಂವಾದ “ ಕಾರ್ಯಕ್ರಮ ಸಪ್ಟೆಂಬರ್ 25ರಂದು ನಡೆಯಿತು. ಪಿಯು ವಿದ್ಯಾರ್ಥಿಗಳನ್ನು ಸಾಧಕ ಆಕಾಂಕ್ಷಿಗಳನ್ನಾಗಿ ಪ್ರೇರೆಪಿಸಿ, ಪರಿವರ್ತಿಸಲೆಂದೇ ಆಯೋಜಿಸಲಾಗಿದ್ದ ಈ ವಿಶೇಷ ಪ್ರಯತ್ನಕ್ಕೆ ಅತಿಥಿಯಾಗಿ ಮಂಜುನಾಥ್. ಎಸ್. ದೇಶದ ಪ್ರತಿಷ್ಠಿತ ಹಾಗೂ ದೇಶದ ನಂಬರ್ 1 ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ ಏಮ್ಸ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮಂಜುನಾಥ್ 2020ರ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ 34ನೇ ರ್ಯಾಂಕ್ ಪಡೆದ ಪ್ರತಿಭಾವಂತ. ಇಂತಹಾ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ವಿದ್ವತ್ ಪಿಯು ಕಾಲೇಜಿನ ನೀಟ್, ಜೆ.ಇ.ಇ, ಸಿಇಟಿ, ಹಾಗೂ ಕಾಮರ್ಸ್ ಆಕಾಂಕ್ಷಿ ವಿದ್ಯಾರ್ಥಿಗಳಲ್ಲಿ ರೋಮಾಂಚನ ಉಂಟು ಮಾಡಿತು. ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು. ಆ ಎಲ್ಲಾ ಪ್ರಶ್ನೆ ಹಾಗೂ ಸಂದೇಹಗಳಿಗೆ ಅನುಭವದ ಆಧಾರದ ಮೇಲೆ ಉತ್ತರಿಸಿದ ಮಂಜುನಾಥ್ ಪ್ರತಿದಿನದ ತಯಾರಿಯು ಎಂಥಹಾ ಪರಿಣಾಮ ಬೀರಬಹುದು ಎಂಬುದನ್ನು ಒತ್ತಿ ಹೇಳಿದರು. “ಪ್ರಯತ್ನಶೀಲತೆ ಹಾಗೂ ಪರಿಣಾಮಕಾರಿ” ಅಭ್ಯಾಸ ನಿರಂತರವಾಗಿರಬೇಕೆಂದು ಹೇಳಿ, ವೈಜ್ಞಾನಿಕ ಸ್ಟಡಿ ಮಾದರಿ, ಫಲೋಅಪ್, ಆಪ್ತಸಮಾಲೋಚನೆ, ಹೆಚ್ಚಿನ ಸಮಯದ ಅಭ್ಯಾಸ ತರಗತಿಗಳು ಹಾಗೂ ವಿಷಯ ತಜ್ಞರ ತರಬೇತಿ ಮಾದರಿಯನ್ನು ಈಗಾಗಲೇ ವಿದ್ವತ್ ಪಿಯು ಕಾಲೇಜಿನಲ್ಲಿ ಅಳವಡಿಸಿಕೊಂಡಿರುವುದರಿಂದ ಅದರ ಧನಾತ್ಮಕ ಪರಿಣಾಮದ ಬಗ್ಗೆ ಆಕಾಂಕ್ಷಿಗಳ ಕಣ್ಣು ತೆರೆಸಿ, ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ಕಾಲೇಜಿನಲ್ಲಿರುವ ಕೌನ್ಸಲಿಂಗ್ ವ್ಯವಸ್ಥೆಯನ್ನು ಕೊಂಡಾಡಿದರು.
ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿ ಪಿಯು ಸೇರಿದ ಮಂಜುನಾಥ್ ಪಿಯುನ ಮೊದಲ 8 ತಿಂಗಳು ಬಹಳ ಸಾಧಾರಣ ಫಲಿತಾಂಶ ಪಡೆಯುತ್ತಿದ್ದು, ನಂತರ ತನ್ನ ಪ್ರತೀದಿನದ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿ ಎನ್.ಸಿ.ಇ.ಆರ್.ಟಿ.ಇ ಪಠ್ಯಪುಸ್ತಕವನ್ನು ಓದಿ, ನೋಟ್ಸ್ ಮಾಡಲಾರಂಭಿಸಿದಾಗ ತಾನೂ ಪರಿಣತಿ ಸಾಧಿಸಬಹುದೆಂದು ತಿಳಿಯಿತು ಹಾಗೂ ಆತ್ಮವಿಶ್ವಾಸ ಹೆಚ್ಚಾಯಿತೆಂದು ಆಸಕ್ತ ವಿದ್ಯಾಸಮೂಹಕ್ಕೆ ತಿಳಿಸಿದರು.ಕಾರ್ಯಕ್ರಮದ ನಂತರವೂ ಒಂದು ಗಂಟೆಗೂ ಹೆಚ್ಚಿನ ಸಮಯ ವಿದ್ಯಾರ್ಥಿ ಸಮೂಹ ಗುಂಪುಕಟ್ಟಿ ಸಂವಾದ ನಡೆಸಿದ್ದು ವಿಶೇಷ.
ಸಂಸ್ಥೆಯ ಅಧ್ಯಕ್ಷ ಸುಭಾಶ್ಷಂದ್ರ ಶೆಟ್ಟಿಯವರು ವಿದ್ವತ್ ಪಿಯು ಕಾಲೇಜಿನ ಸಾಧಕರ ಮಾದರಿ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿ ವಿದ್ವತ್ ಫೌಂಡೇಶನ್ ನಿಂದ ಡೆಸ್ಟಿನೇಶನ್ ವರೆಗೆ ಹೇಗೆ ಮಾರ್ಗದರ್ಶನ ಮಾಡುವ ವ್ಯವಸ್ಥೆಯಾಗಿದೆ ಎಂಬುದನ್ನು ವಿವರಿಸಿದರು.
ಸಂಸ್ಥೆಯ ಕೋಶಾಧಿಕಾರಿ ಎಂ.ಕೆ ಕಾಶಿನಾಥ್ ಹಾಗೂ ಪ್ರಾಂಶುಪಾಲ ಅರುಣ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು. ಶೈಕ್ಷಣಿಕ ನಿರ್ದೇಶಕ ಗಂಗಾಧರ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.