ಬೆಳ್ತಂಗಡಿ: ಮಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಮತ್ತು ಮಂಗಳೂರು, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಶಾಖೆ ಹೊಂದಿರುವ ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ 14ನೇ ವಾರ್ಷಿಕ ಸಾಮಾನ್ಯ ಸಭೆ ಸೆ.15ರಂದು ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ಸಂಘದ ಅಧ್ಯಕ್ಷ ಎಸ್.ಸತೀಶ್ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.
15 ಫೆಬ್ರವರಿ 2011ರಂದು ಕೇವಲ ರೂ.20 ಲಕ್ಷ ಶೇರು ಬಂಡವಾಳ ಹಾಗೂ ರೂ.13.30 ಲಕ್ಷ ಠೇವಣಿಯೊಂದಿಗೆ ಪ್ರಾರಂಭವಾದ ಈ ಸಂಘ 31 ಮಾರ್ಚ್ 2024ರ ಅಂತ್ಯಕ್ಕೆ ರೂ 72 ಲಕ್ಷಕ್ಕೂ ಹೆಚ್ಚಿನ ಶೇರು ಬಂಡವಾಳದೊಂದಿಗೆ 4,953 ಸದಸ್ಯರ ಸಹಕಾರದಿಂದ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ಅಧ್ಯಕ್ಷ ಎಸ್.ಸತೀಶ್ ನಾಯಕ್ ಸಭೆಗೆ ತಿಳಿಸಿದರು. ರೂ.18.80 ಕೋಟಿ ಹೂಡಿಕೆಯೊಂದಿಗೆ ರೂ 55.75 ಕೋಟಿ ದುಡಿಯುವ ಬಂಡವಾಳ ಹಾಗೂ ರೂ.34.68 ಲಕ್ಷ ಮೀಸಲಿನೊಂದಿಗೆ ಮಾರ್ಚ್ 2024ರ ಅಂತ್ಯಕ್ಕೆ ರೂ.46.42 ಕೋಟಿ ಠೇವಣಿ ಹಾಗೂ ರೂ.30.75 ಕೋಟಿ ಸಾಲ ಮತ್ತು ಒಟ್ಟು ವ್ಯವಹಾರ 77.17 ಕೋಟಿ ಆಗಿರುವುದರ ಬಗ್ಗೆ ಸದಸ್ಯರನ್ನುದ್ದೇಶಿಸಿ ಅವರು ಮಾಹಿತಿ ನೀಡಿದರು.
ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಲ್ ಕಮಲಾಕ್ಷ ಅವರು ಮಾರ್ಚ್ 2024ರ ಅಂತ್ಯಕ್ಕೆ ಗಳಿಸಿದ ನಿವ್ವಳ ಲಾಭ ಹಾಗೂ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವ ಬಗ್ಗೆ ಸಭೆಯ ಒಪ್ಪಿಗೆ ಪಡೆದರು. ಮಾರ್ಚ್ 2024ರ ಅಂತ್ಯಕ್ಕೆ ಲೆಕ್ಕಪರಿಶೋಧನೆಯಲ್ಲಿ ಸಹಕಾರಿಗೆ ‘ಎ’ ಶ್ರೇಣಿ ದೊರಕಿದೆ ಎಂದು ಅವರು ತಿಳಿಸಿದರು. ಉಪಾಧ್ಯಕ್ಷ ಜಗನ್ನಾಥ ಕಾಮತ್ ಸ್ವಾಗತಿಸಿ 2024-25ರ ಅಂತ್ಯಕ್ಕೆ ಸಹಕಾರಿಯ ಒಟ್ಟು ವ್ಯವಹಾರ ರೂ.100 ಕೋಟಿ ತಲುಪುವ ಗುರಿ ಹೊಂದಿರುವುದಾಗಿ ಸದಸ್ಯರಿಗೆ ತಿಳಿಸಿದರಲ್ಲದೆ ಎಲ್ಲಾ ಸದಸ್ಯರು ಈ ಗುರಿ ತಲುಪಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಜಿ. ಪ್ರಭು ವಂದಿಸಿದರು.