ಬೆಳ್ತಂಗಡಿ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಮಹೇಶ್ ಶೆಟ್ಟಿ ತಿಮರೋಡಿ ಸೆ.8ರಂದು ಉಜಿರೆಯಲ್ಲಿ ನಡೆದ ಗಣೇಶ ಚತುರ್ಥಿ ಸಭೆಯಲ್ಲಿ ಹಿಂದೂ ಮತ್ತು ಜೈನ ಧರ್ಮಗಳ ನಡುವೆ ವೈಷಮ್ಯ ಉಂಟು ಮಾಡಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಜಿರೆ ಹಳೆಪೇಟೆಯ ಅಜಿತ್ ಹೆಗ್ಡೆ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಇವತ್ತು ಧರ್ಮಸ್ಥಳ ಅನ್ನುವಂತಹ ಆ ಒಂದು ಸನಾತನ ಹಿಂದೂ ಧರ್ಮದ ಧರ್ಮಪೀಠ, ನ್ಯಾಯಪೀಠ ಏನಿದೆಯೋ ಅದು ಇವತ್ತು ಜೈನರ ವಶವಾಗಿದೆ. ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರು, ಇವತ್ತು ಜೈನರು ಕೂಡ ಸ್ವತಂತ್ರ ಭಾರತದಲ್ಲಿ ಸನಾತನವಾದ ಹಿಂದೂ ಧರ್ಮವನ್ನು ಹಿಂದೂ ದೇವಸ್ಥಾನಗಳ ದಾಖಲೆಗಳನ್ನು ನಾಶ ಮಾಡಿ ಜೈನರ ವಶ ಮಾಡಿಕೊಂಡಿದ್ದಾರೆ. ಶೇ.0.04 ಇರುವ ಜೈನರು ಶೇ.86 ಇರುವ ಹಿಂದೂಗಳನ್ನು ಮೂರ್ಖರನ್ನಾಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ರಾಂತಿಯಾಗುತ್ತದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಭಾಷಣ ಮಾಡಿದ್ದಾರೆ. ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ, ಟೀಕೆ ಮಾಡಿದ್ದು, ಜಾತಿ ಮತ್ತು ಧಾರ್ಮಿಕ ಸಾಮರಸ್ಯ ಭಂಗ ಮಾಡುವ ಉದ್ದೇಶದಿಂದ ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಜೈನ ಮತ್ತು ಹಿಂದೂ ಧರ್ಮ, ಸಮುದಾಯಗಳ ನಡುವೆ ಹಿಂಸಾತ್ಮಕ ಘಟನೆಗಳನ್ನು ಉಂಟು ಮಾಡಲು ಮತ್ತು ಜನರು ದಂಗೆ ಏಳುವಂತೆ ಪ್ರಯತ್ನಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಾಯ್ದೆಯ ಕಲಂ 196, 197, 299ರ ಅಡಿಯಲ್ಲಿ ಮಾತ್ರವಲ್ಲದೆ, ಇತರ ಕಾನೂನುಗಳ ಅಡಿಯಲ್ಲಿ ತ್ವರಿತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ. ಜತೆಗೆ ಭಾಷಣದ ವಿಡಿಯೋ ಒಳಗೊಂಡಿರುವ ಪೆನ್ ಡ್ರೈವ್ ಪೊಲೀಸರಿಗೆ ನೀಡಲಾಗಿದೆ.