ಕೊಕ್ಕಡ: ಗಣೇಶ ಚೌತಿ ಪ್ರಯುಕ್ತ ಪಟ್ರಮೆ ಗೆಳೆಯರ ಬಳಗ ಇದರ ನೇತೃತ್ವದಲ್ಲಿ ಪಟ್ರಮೆ ಗ್ರಾಮದ ಅನಾರು ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಮಾದರಿಯಾಗಿ ಆಚರಿಸಲಾಯಿತು.
ಶಾಲೆಯ ಸುತ್ತಮುತ್ತ ಸ್ವಚ್ಚಗೊಳಿಸಲಾಯಿತು. ಶಾಲಾ ಮೈದಾನದ ಬದಿಯ ಚರಂಡಿಯನ್ನು ಸರಿಪಡಿಸಿ ಮೈದಾನಕ್ಕೆ ಚರಂಡಿಯಿಂದ ನೀರುಬಾರದಂತೆ ಮಾಡಲಾಯಿತು. ತೆಂಗಿನ ಮರಗಳ ಬುಡ ಸ್ವಚ್ಚಗೊಳಿಸಲಾಯಿತು. ಹೊಸದಾಗಿ 4 ತೆಂಗಿನ ಗಿಡ, ಅಡಿಕೆ ತೋಟದಲ್ಲಿ ಸುಮಾರು 130 ಹೊಸ ಗಿಡಗಳನ್ನು ನಡಲಾಯಿತು. ಎಲ್ಲಾ ಅಡಿಕೆ, ತೆಂಗಿನ ಗಿಡಗಳಿಗೆ ಗೊಬ್ಬರ ಹಾಕಲಾಯಿತು. ಮೈದಾನವನ್ನು ಅಗಲಗೊಳಿಸಲಾಯಿತು. ಶಾಲಾ ಆವರಣದ ಹೊರಗೆ ರಸ್ತೆ ಬದಿಯಲ್ಲಿ ಸ್ವಚ್ಚಗೊಳಿಸಲಾಯಿತು. ಶಾಲಾ ಮುಖ್ಯ ಸಂಪರ್ಕ ರಸ್ತೆಯನ್ನು ಚರಳು ಹಾಕಿ ಸಂಚಾರ ಯೋಗ್ಯಗೊಳಿಸಿ ಶ್ರಮದಾನ ಮಾಡುವ ಮೂಲಕ ವಿಶಿಷ್ಟವಾಗಿ ಚೌತಿ ಆಚರಿಸಲಾಯಿತು.
ಶಾಲಾ ಶಿಕ್ಷಕ ಜಯಂತರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೆಂಗಿನ ಗಿಡಗಳನ್ನು ನೆಡುವ ಮೂಲಕ ಶ್ರಮದಾನ ಪ್ರಾರಂಭಿಸಲಾಗಿತ್ತು. ಗೆಳೆಯರ ಬಳಗದ ಕಾರ್ಯದರ್ಶಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಧನಂಜಯ ಗೌಡ ಸ್ವಾಗತಿಸಿದರು. ಗೆಳೆಯರ ಬಳಗದ ಅಧ್ಯಕ್ಷ ಚೋಮ ಪಾದೇಜಾಲು, ಹಿರಿಯ ಕಾರ್ಮಿಕ ನಾಯಕ, ವಕೀಲ, ಶಾಲಾ ಹಳೆವಿದ್ಯಾರ್ಥಿ ಬಿ.ಯಂ.ಭಟ್ ಉಪಸ್ಥಿತರಿದ್ದರು.ಮದ್ಯಾಹ್ನ ಊಟದ ವಿರಾಮದಲ್ಲಿ ಶ್ರಮದಾನಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಸಲಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಬಿ.ಯಂ.ಭಟ್ ಬಹುಮಾನ ವಿತರಣೆ ಮಾಡಿದರು. ಮಕ್ಕಳ ಸಂಗೀತ ಸ್ಪರ್ಧೆ ನಡೆಸಲಾಗಿ ವಿಜೇತ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು. ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಗೆಳೆಯರ ಬಳಗ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸುಮಾರು 75ಕ್ಕೂ ಮಿಕ್ಕಿ ಶ್ರಮದಾನದಲ್ಲಿ ಶಾಲಾಭಿಮಾನದಿಂದ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಫಾರೂಕ್ ಮಡೆಂಜೋಡಿ ಉಚಿತವಾಗಿ ಜೆಸಿಬಿಯ ಸೇವೆ ಒದಗಿಸಿದ್ದರು. ಜಯಂತ ಪಾದೇಜಾಲು, ದಿನೇಶ್ ಮೈಕೆ, ಲಕ್ಷ್ಮಿಕಾಂತ ಏರಾಜೆ ಹುಲ್ಲು ತೆಗೆಯುವ ಮಿಶನ್ ಸೇವೆ ಒದಗಿಸಿದ್ದರು. ಪ್ರವೀಣ ಯಂ.ಕೆ ಮರ ಕತ್ತರಿಸುವ ಯಂತ್ರ ತಂದು ಸಹಕಾರ ನೀಡಿದ್ದರು. ಆರಿಶ್ ಪಟ್ರಮೆ ಸಂಗಡಿಗರ ಒಂದು ಲೋಡು ಚರಳು ತಂದು ಸಹಕರಿಸಿದರು. ಡೀಗಯ ಗೌಡ ಕಾಯಿಲ ಮತ್ತು ಸಂಜೀವ ಗೌಡ ಬಟ್ಟಾಡಿ ಇವರು ತೆಂಗಿನ ಗಿಡಗಳನ್ನು ಒದಗಿಸಿದ್ದರು. ಮಹಮದ್ ಅನಸ್ 20 ಅಡಿಕೆ ಗಿಡ, ಸತೀಶ್ ಬಟ್ಟಾಡಿ 10 ಅಡಿಕೆ ಗಿಡ, ನೀಲಯ ಗೌಡ ಹಿರ್ತಡ್ಕ 15 ಅಡಿಕೆ ಗಿಡ, ದಿನೇಶ್ ಮೈಕೆ 10 ಅಡಿಕೆ ಗಿಡ ಉಚಿತವಾಗಿ ಒದಗಿಸಿದ್ದರು. ಮದ್ಯಾಹ್ನ ಊಟದ ಅಕ್ಕಿಯನ್ನು ಮೈಕೆ ರಾಜೇಶ್, ತರಕಾರಿಯನ್ನು ಹರೀಶ್ ಕೋಡಂದೂರು, ತೆಂಗಿನ ಕಾಯಿಗಳನ್ನು ರಾಘವ ಗೌಡ ಅನಾರು ಮತ್ತು ಡೊಂಬಯ್ಯ ಗೌಡ ಒದಗಿಸಿದ್ದರು. ಗಿಡಗಳಿಗೆ ಗೊಬ್ಬರವನ್ನು ಅಣ್ಣು ಗೌಡ ಹಿರ್ತಡ್ಕ ಇವರು ಒದಗಿಸಿದ್ದರು.
ಶ್ರಮದಾನದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು, ಊರವರು, ಶಾಲಾ ಪೋಷಕರು ಮಾತ್ರವಲ್ಲದೆ ಕೊಕ್ಕಡ ಗ್ರಾಮದಿಂದಲೂ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ಪಟ್ರಮೆ ಗೆಳೆಯರ ಬಳಗ ಸಂಘಟನೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.