ಬೆಳ್ತಂಗಡಿ: ಅಪಾರ ಬುದ್ದಿಮತ್ತೆ ಮತ್ತು ಕೌಶಲ್ಯ ಅರಿತಿರುವ ಮನುಷ್ಯನ ಅತಿಮಾನುಷವಾದ ಶಕ್ತಿಯನ್ನು ಆತನಿಗೆ ಅಂಟಿಕೊಳ್ಳುವ ವ್ಯಸನವೆಂಬ ಮಾಹಾಮಾರಿ ನಾಶಗೊಳಿಸುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿರಿಕೊಂಡು ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಈ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಆಶಯವೇ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರದ್ದು ಎಂದು ಜನಜಾಗೃತಿ ವೇದಿಕೆಯ ತಾ. ಸಮಿತಿ ಸದಸ್ಯ, ಪತ್ರಕರ್ತ ಅಚ್ಚು ಮುಂಡಾಜೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇವುಗಳ ವತಿಯಿಂದ ಕೊಯ್ಯೂರು ಸರಕಾರಿ ಪ.ಪೂ ಕಾಲೇಜಿನಲ್ಲಿ ಸೆ.6ರಂದು ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ಉಪನ್ಯಾಸ ನಡೆಸುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಚಾರ್ಯ ಮೋಹನ ಗೌಡ ಮಾತನಾಡಿ, ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ನಡೆಯುತ್ತಿರುವ ಮಾದಕ ವ್ಯಸನ ಹಂಚುವ ಜಾಲಗಳ ಬಗ್ಗೆ ಎಚ್ಚರಿಕೆಯಿಂದಿರಲು ಇಂತಹಾ ಕಾರ್ಯಕ್ರಮ ಪ್ರೇರಣಾದಾಯಿ ಎಂದರು.
ಗ್ರಾ.ಯೋಜನೆಯ ಲಾಯಿಲ ವಲಯದ ಮೇಲ್ವಿಚಾರಕ ಶುಶಾಂತ್ ಪ್ರಸ್ತಾವನೆಗೈದರು. ಕೊಯ್ಯೂರು ವಿಭಾಗದ ಸೇವಾ ಪ್ರತಿನಿಧಿ ಕುಸುಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರೀತಿ ಸ್ವಾಗತಿಸಿದರೆ, ಲಕ್ಷ್ಮಣ ನಿರೂಪಿಸಿದರು. ಉಪನ್ಯಾಸಕ ಸುರೇಶ್, ವಿದ್ಯಾರ್ಥಿ ನಾಯಕಿ ಪ್ರಜ್ಞಾ ಸಹಕಾರ ನೀಡಿದರು. ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಸಹಕಾರ ನೀಡಿದ ವಿದ್ಯಾರ್ಥಿಗಳಿಬ್ಬರನ್ನು ಪುರಸ್ಕರಿಸಲಾಯಿತು.