ಕಲ್ಮಂಜ: ಸುಮಾರು 2000 ವರ್ಷಕ್ಕಿಂತಲೂ ಹೆಚ್ಚು ಕಾಲ ವಿದೇಶಿ ದಾಳಿಗೆ ತುತ್ತಾದ ಭಾರತ, ಸ್ವಾತಂತ್ರ್ಯಗೊಂಡ ಅನಂತರ ತನ್ನ ನೆಲೆಯನ್ನು ಭದ್ರಗೊಳಿಸಿ, ವಿಶ್ವ ಗುರುವಾಗುವತ್ತ ಸಾಗುತಿದೆ ಎಂದಾದರೆ, ಅದಕ್ಕೆ ನಮ್ಮ ಸಂಘಟನೆ ಮತ್ತು ಸಂಸ್ಕಾರಯುತ ಬದುಕೇ ಕಾರಣ ಎಂದು ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್ ಡಾ.ರವೀಶ್ ಪಡುಮಲೆ ಅಭಿಪ್ರಾಯಪಟ್ಟರು. ಅವರು ಸೆಪ್ಟೆಂಬರ್ 1ರಂದು ಕಲ್ಮಂಜ ಗ್ರಾಮದ ಸದಾಶಿವೇಶ್ವರ ದೇವಳದಲ್ಲಿ, ಓಂಕಾರೇಶ್ವರ ಭಜನಾ ಮಂಡಳಿ ಶ್ರೀ ಕ್ಷೇತ್ರ ಪಜಿರಡ್ಕ ಇದರ ಆಶ್ರಯದಲ್ಲಿ ನಡೆದ 12ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಭಾಷಣವನ್ನು ಮಾಡುತ್ತಿದ್ದರು.
ತಮ್ಮ ಮಾತನ್ನು ಮುಂದುವರೆಸುತ್ತಾ, ಜೀವನ ಯಾಂತ್ರಿಕೃತವಾಗುತಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳತ್ತ ಆಧುನಿಕ ಮನಸ್ಸುಗಳ ಒಲವು ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ಮಜ್ದೂರ್ ಸಂಘ ಇದರ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಸಂಘಟನೆಯ ದೃಷ್ಟಿಯಲ್ಲಿ ಪಜಿರಡ್ಕ ಭಾಗದ ಚಟುವಟಿಕೆಗಳು ಹೊಸ ಭರವಸೆಯನ್ನು ಭರವಸೆಯನ್ನು ಮೂಡಿಸುತ್ತಿದೆ ಎಂದರು.
ವೇದಿಕೆಯಲ್ಲಿ ಕನ್ಯಾಡಿ ಶಾಲಾ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ನಂದ ಭಟ್ಟ್, ಪ್ರಗತಿಪರ ಕೃಷಿಕ ಹರ್ಷೇಂದ್ರ ಗುಡಿಗಾರ್ ಪಡ್ಪು, ಸುರ್ಯ, ಓಂಕಾರೇಶ್ವರ ಭಜನಾ ಮಂಡಳಿಯ ಸದಸ್ಯ ಆನಂದ ಎಸ್ .ಡಿ, ಸಮಿತಿ ಅಧ್ಯಕ್ಷ ಸುಜನ್ ಕುಮಾರ್, ಕಾರ್ಯದರ್ಶಿ ಚೇತನ್ ಗುಡಿಗಾರ್ ಉಪಸ್ಥಿತರಿದ್ದು ದೇವಳದ ಪ್ರಧಾನ ಅರ್ಚಕ ರಾಜೇಶ್ ಹೊಳ್ಳ ಇವರನ್ನು ಗೌರವಿಸಲಾಯಿತು.
ಶಿಕ್ಷಕ ಕೃಷ್ಣಪ್ಪ ಎಂ.ಕೆ ಸ್ವಾಗತಿಸಿ, ಭಜನಾ ಮಂಡಳಿ ಸಂಚಾಲಕ ರಾಜೇಶ ಎಂ ಕೆ ಧನ್ಯವಾದವಿತ್ತು, ಸುಂದರೇಶ್ ಎಂ.ಕೆ ನಿರೂಪಿಸಿದರು. ಆಟೋಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.