ಪುದುವೆಟ್ಟಿನ ಮಡ್ಯದಲ್ಲಿ ರಸ್ತೆ ಅತಿಕ್ರಮಣ ತೆರವು- ಪೊಲೀಸ್ ಭದ್ರತೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯಾಚರಣೆ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯ ಅತಿಕ್ರಮಣವನ್ನು ಸೆ.2ರಂದು ಪೊಲೀಸ್ ಭದ್ರತೆಯಲ್ಲಿ ಗ್ರಾಮ ಪಂಚಾಯತ್ ತೆರವುಗೊಳಿಸಿದೆ.

ಶ್ರೀಪತಿ ಹೆಬ್ಬಾರ್ ಎಂಬವರು ರಸ್ತೆಯನ್ನು ಅತಿಕ್ರಮಣ ಮಾಡಿ, ಬಂದ್ ಮಾಡಿರುವ ಕುರಿತು ಕಳೆದ ಗ್ರಾಮಸಭೆಯಲ್ಲಿ ಚರ್ಚೆಯಾಗಿತ್ತು. ರಸ್ತೆ ಬಂದ್ ಮಾಡಿದ ಕಾರಣ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿ, ನೀರಿನ ಟ್ಯಾಂಕ್ ಸಂಪರ್ಕ ಕಷ್ಟವಾಗಿರುವ ಕುರಿತು ಸ್ಥಳೀಯರು ದೂರು ನೀಡಿದ್ದರು. ಸಭೆಯ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅತಿಕ್ರಮಣವನ್ನು ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಸೆ.2ರಂದು ಜೆಸಿಬಿ ಯಂತ್ರದ ಮೂಲಕ ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.

ಜೀಪು ಅಡ್ಡವಿಟ್ಟು ತಡೆ: ಮಡ್ಯದಿಂದ ಹೊಳೆಯವರೆಗೆ ಸಾಗುವ ರಸ್ತೆಯ ಮಧ್ಯೆ ಒಂದು ಟೈರು ಕಳಚಿದ ಸ್ಥಿತಿಯಲ್ಲಿ ಜೀಪನ್ನು ನಿಲ್ಲಿಸಲಾಗಿತ್ತು. ಟೈರು ಪಂಕ್ಚರ್ ಆಗಿದೆ ಎಂದು ಕೆಲಸದವರು ತಿಳಿಸಿದರು. ಉದ್ದೇಶಪೂರ್ವಕವಾಗಿಯೇ ರಸ್ತೆಯ ಮಧ್ಯೆ ಜೀಪನ್ನು ನಿಲ್ಲಿಸಲಾಗಿದೆ ಎಂದು ಸ್ಥಳೀಯರು ದೂರಿದರು. ವಾಗ್ವಾದ ನಡೆದು, ಕೊನೆಗೆ ರಸ್ತೆಯ ಬದಿಯಿಂದ ಪೊದೆಗಳನ್ನು ಸರಿಸಿ ಮುಂದೆ ಸಾಗಿದ ಜೆಸಿಬಿ, ರಸ್ತೆಯಲ್ಲಿ ಹಾಕಲಾಗಿದ್ದ ಸೈಜು ಕಲ್ಲುಗಳನ್ನು ತೆರವುಗೊಳಿಸಿತು. ತೋಡಿಗೆ ಅಕ್ರಮವಾಗಿ ಹಾಕಲಾಗಿದ್ದ ಮೋರಿಯನ್ನೂ ತೆರವುಗೊಳಿಸಿ, ಸ್ಥಳೀಯರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೂರ್ಣಾಕ್ಷ, ಮಾಜಿ ಅಧ್ಯಕ್ಷ ಯಶವಂತ ಗೌಡ, ಸದಸ್ಯರಾದ ಭಾಸ್ಕರ, ರಾಮೇಂದ್ರ, ವನಿತಾ, ಇಂದಿರಾ, ರೇಣುಕಾ, ಅಪ್ಪಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬಸಪ್ಪನಗೌಡ, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರನ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here