


ಗುರುವಾಯನಕೆರೆ: ದೇಶ ರಕ್ಷಣೆ ಮಾಡುವ ಸೈನಿಕರಾಗಲಿ, ಕಾನೂನು ಸುವ್ಯವಸ್ಥೆ ಕಾಪಾಡುವ ಆರಕ್ಷರಾಗಲಿ ದೇಶದ ಅಮೂಲ್ಯ ಆಸ್ತಿ. ಅವರಿಂದಾಗಿ ನಾವೆಲ್ಲಾ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಅವರು ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ 78ನೆಯ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾದ ಭಾರತೀಯ ಸೇನೆ ಮತ್ತು ಕರ್ನಾಟಕ ಆರಕ್ಷಕ ಪಡೆಗಳಲ್ಲಿ ಸೇವೆ ಸಲ್ಲಿಸುವ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಹೆತ್ತವವರನ್ನು ಗೌರವಿಸುವ ‘ರಕ್ಷಕ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಯೋಧರು ಹಾಗೂ ಆರಕ್ಷಕರು ನಮ್ಮ ರಕ್ಷಕರಾದರೆ, ರೈತರು ನಮ್ಮ ಪೋಷಕರು ಎಂದು ಬಣ್ಣಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಮಣಿಪಾಲ್ ಮೀಡಿಯಾ ಗ್ರೂಪ್ ನ ಮ್ಯಾಗಝೀನ್ ಆಂಡ್ ಇನಿಶಿಯೇಟಿವ್ ನ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಅವರು ಮಾತನಾಡಿ, ಹೆತ್ತವರಿಂದ ಮಕ್ಕಳಿಗೆ ಗೌರವ ಬರುವುದು ಸಹಜ. ಆದರೆ ಎಕ್ಸೆಲ್ ನ ವಿದ್ಯಾರ್ಥಿಗಳಿಂದ ಹೆತ್ತವರಿಗೆ ಗೌರವ ಸಂದಾಯವಾಗುತ್ತಿದೆ ಎಂದರು.



ಈ ಸಂದರ್ಭದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಕರಪತ್ರ ಅನಾವರಣ ಮಾಡಲಾಯಿತು.ಎಕ್ಸೆಲ್ ಮಾಧ್ಯಮ ತಂಡದಿಂದ ಎಕ್ಸೆಲ್ ಮೀಡಿಯಾ ಲೋಕಾರ್ಪಣೆ ನಡೆಯಿತು. ಜೊತೆಗೆ ಎಕ್ಸೆಲ್ ಆಪ್ ನ್ನು ಬಿಡುಗಡೆ ಮಾಡಲಾಯಿತು.2024ರ ಸಾಲಿನ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಭಿರಾಮ್ ಬಿ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ ರಕ್ಷಕ ನಮನ ಕಾರ್ಯಕ್ರಮ ನಿರ್ವಹಿಸಿದರು.ಜೀವ ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರಜ್ವಿತ್ ರೈ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಿರ್ವಹಿಸಿದರು.
ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಅರಮಲೆ ಬೆಟ್ಟ ಕ್ಯಾಂಪಸ್ ನ ಪ್ರಭಾರ ಪ್ರಾಚಾರ್ಯ ಡಾ.ಪ್ರಜ್ವಲ್ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ವಿಕಾಸ್ ಹೆಬ್ಬಾರ್ ಸಮಾರಂಭದ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮುನ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.









