ಗುರುವಾಯನಕೆರೆ: ವಿಜ್ಞಾನ ಮತ್ತು ವಾಣಿಜ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಹೊಸ ದಾಖಲೆ ಬರೆದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯಾದ ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣಗಳ ಖರೀದಿಗೆ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು 78ನೆಯ ಸ್ವಾತಂತ್ರ್ಯ ಸಂಭ್ರಮ ಸಂದರ್ಭದಲ್ಲಿ ನೀಡಲಾಯಿತು.
ಗುರುವಾಯನಕೆರೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಚೆಕ್ ಸ್ವೀಕರಿಸಿದರು.ಎಕ್ಸೆಲ್ ಪದವಿ ಪೂರ್ವ ಕಾಲೇಜು ಶಿಕ್ಷಣದ ಜೊತೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿರುವುದು ರಾಜ್ಯದ ಖಾಸಗಿ ಸಂಸ್ಥೆಗಳಿಗೆ ಮಾದರಿಯಾದ ಕಾರ್ಯವೆಂದು ಹೇಳಿ ಮುಖ್ಯ ಅತಿಥಿಗಳಾದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅಭಿನಂದಿಸಿದರು.
ಇಂಥ ಸಮಾಜ ಮುಖಿ ಕಾರ್ಯಗಳ ಮೂಲಕ ಎಕ್ಸೆಲ್ ವಿದ್ಯಾ ಸಂಸ್ಥೆಗಳು ಜನರ ಹೃದಯ ಗೆಲ್ಲುತ್ತವೆ ಎಂದು ಇನ್ನೋರ್ವ ಅತಿಥಿ ಉದಯವಾಣಿ ಗ್ರೂಪ್ ನ ಮ್ಯಾಗಝೀನ್ಸ್ ಆಂಡ್ ಸ್ಪೆಷಲ್ ಇನಿಷಿಯೇಟಿವ್ ಉಪಾಧ್ಯಕ್ಷರಾದ ರಾಮಚಂದ್ರ ಮಿಜಾರ್ ಹೇಳಿದರು.
ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ, ಅರಮಲೆ ಬೆಟ್ಟ ಕ್ಯಾಂಪಸ್ ನ ಇನ್ ಚಾರ್ಚ್ ಪ್ರಿನ್ಸಿಪಾಲ್ ಡಾ.ಪ್ರಜ್ವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.