ಬಳಂಜ: ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡ ಕುಸಿತವಾಗುತ್ತಿದ್ದು ಬಳಂಜ, ನಾಲ್ಕೂರು, ತೆಂಕಕಾರಂದುರಿನ ಹಲವು ಕಡೆ ಮನೆಗಳಿಗೆ ಹಾಗೂ ಕೃಷಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿವೆ.
ನಾಲ್ಕೂರು ಗ್ರಾಮದ ಕರಂಬಿತ್ತಿಲ್ ಎಂಬಲ್ಲಿ ಹರೀಶ್ ಶೆಟ್ಟಿಯವರ ಮನೆ ಪಕ್ಕದ ಧರೆ ಕುಸಿದು ಬಿದ್ದಿದೆ. ರಾಮನಗರ ಸದಾನಂದ ಶೆಟ್ಟಿಯವರ ಮನೆ ಬಳಿಯ ಧರೆ ಕುಸಿದು ಸಮಸ್ಯೆ ಉಂಟಾಗಿದೆ. ನಾಲ್ಕೂರು ಕುದ್ರೋಟ್ಟು ಎಂಬಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಸಂಪರ್ಕಕ್ಕೆ ಅಡಚಣೆ ಆಗಿದೆ.ಅಳದಂಗಡಿ ಸಹಕಾರಿ ಸಂಘದ ನಿರ್ದೇಶಕ ದಿನೇಶ್.ಪಿ.ಕೆ ಯವರ ತೋಟದಲ್ಲಿ ಗುಡ್ಡ ಕುಸಿತವಾಗಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.
ಬಳಂಜ ಎಲ್ಯೋಟ್ಟು ಯುವರಾಜ್ ವೈ ಯವರು ಮತ್ತು ಜೆರಾಮ್ ಲೋಬೊರವರ ಮನೆ ಬಳಿ ಧರೆ ಕುಸಿದು ಅಡಿಕೆ ತೋಟಕ್ಕೆ ನೀರು ನುಗ್ಗಿ ಕೃಷಿ ನಷ್ಟವಾಗಿದೆ. ಏಲ್ಯೊಟ್ಟು ಬಳಿ ಸಂಜೀವ ಪೂಜಾರಿಯವರ ಧರೆ ಬಿದ್ದು ಮನೆಯ ಗೋಡೆಯವರೆಗೆ ಮಣ್ಣು ಬಿದ್ದಿದ್ದು ಸ್ಥಳೀಯ ಸಮಾಜ ಮುಖಿ ಸೇವೆ ಮಾಡುವ ಯುವಕರು ಇದನ್ನು ತೆರವುಗೊಳಿಸಲು ಪ್ರಯತ್ನಿಸಿದರು.
ಈಗಲೂ ಅಲ್ಲಲ್ಲಿ ಗುಡ್ಡ ಕುಸಿತ ಆಗುತ್ತಿರುವ ವರದಿಗಳು ಬರುತ್ತಿದ್ದು ಮಳೆಯೂ ಜೋರಾಗಿ ಸುರಿಯುತ್ತಿದೆ.ಸ್ಥಳೀಯ ಗ್ರಾಮಸ್ಥರು ಆತಂಕದ ನಡುವೆಯೇ ಜೀವನ ನಡೆಸುತ್ತಿದ್ದು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.ಎಲ್ಲಿ ಧರೆ ಕುಸಿತವಾಗಿ ಮನೆಗಳಿಗೆ ಸಮಸ್ಯೆ ಆದರೆ ಇಲ್ಲಿನ ಯುವಕರು ತಕ್ಷಣವೇ ಸ್ಪಂದಿಸಿ ತೆರವು ಕಾರ್ಯಾಚರಣೆಗೆ ಇಳಿಯುತ್ತಿದ್ದು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಬಿ.ಅಮೀನ್ ರವರ ನೇತೃತ್ವದಲ್ಲಿ ಆಶ್ವಿನ್ ಬಿ.ಕೆ., ಪುರಂದರ ಪೆರಾಜೆ, ಸದಾನಂದ ತೋಟದಪಲ್ಕೆ, ಹರೀಶ್ ವೈ ಚಂದ್ರಮ, ದೀಪಕ್ ಎಚ್.ಡಿ., ದಿನೇಶ್ ಪಿ.ಕೆ., ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಸಾಧಿಕ್ ಬಳಂಜ, ಜೆರಾಮ್ ಲೋಬೋ ಮುಂತಾದವರು ಶ್ರಮಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.