ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ತಾಲೂಕಿನ ಪ್ರೌಢಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರ ವಿಷಯ ವೇದಿಕೆಯ ಸಮಾಲೋಚನ ಸಭೆಯು ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯಲ್ಲಿ ಜರಗಿತು.
ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಗುರಿಗಳು ಎಂಬ ವಿಷಯದಲ್ಲಿ ಸಮಾಲೋಚನ ಸಭೆಯ ನಡೆಯಿತು. ಕನಿಷ್ಠ ಮಟ್ಟದ ಕಲಿಕಾ ಗುಣಮಟ್ಟ ಸಾಧಿಸಲು ಕೈಗೊಳ್ಳಬೇಕಾದ ಚಟುವಟಿಕೆಗಳ ಬಗ್ಗೆ, ಅಳವಡಿಸಿಕೊಳ್ಳಬೇಕಾದ ಕಲಿಕಾ ಕಾರ್ಯಕ್ರಮಗಳ ಕುರಿತು ಚರ್ಚೆಯನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ, ವಸಂತ ನಾಯ್ಕ್ ಪುತ್ತಿಲ, ಚೈತ್ರಾ ಪಡಂಗಡಿ, ಪೂರ್ಣಿಮಾ ಬೆಳ್ತಂಗಡಿಯವರು ಪಾಲ್ಗೊಂಡಿದ್ದರು. ಕೊಕ್ರಾಡಿ ಶಾಲಾ ಶಿಕ್ಷಕ ಮಹಮ್ಮದ್ ರಿಯಾಜ್ ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ವೇದಿಕೆಯ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿ ಇದೀಗ ನಿವೃತ್ತರಾಗಲಿರುವ, ಬೆಳಾಲು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ನೆರವೇರಿಸಿದರು.