ನಡ: ಸರಕಾರಿ ಪ.ಪೂ ಕಾಲೇಜಿನಲ್ಲಿ ಜು.27ರಂದು ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಹಾಗೂ ಸ.ಪ.ಪೂ. ಕಾಲೇಜು ನಡ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಜೆ.ಎಂ.ಎಫ್.ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಧೀಶ ವಿಜಯೇಂದ್ರ ಟಿ.ಹೆಚ್. ಗಿಡಕ್ಕೆ ನೀರನ್ನು ಎರೆಯುವುದರ ಮೂಲಕ ವಿನೂತನವಾಗಿ ಉದ್ಘಾಟಿಸಿದರು. ಬಳಿಕ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕಾನೂನಿನ ಅರಿವು ನಮ್ಮ ಯುವ ಪೀಳಿಗೆಗೆ ಅತ್ಯಗತ್ಯ.ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲಗಳಿಗೆ ಬಲಿಯಾಗಿ ಎಳವೆಯಲ್ಲೇ ಮುರುಟಿ ಹೋಗುವ ಅನೇಕ ಉದಾಹರಣೆಗಳು ನಮ್ಮ ಸಮಾಜದಲ್ಲಿವೆ.ಆದ್ದರಿಂದ ಯುವ ಜನತೆ ಈ ಸಂಕೋಲೆಗಳಿಂದ ಹೊರಬಂದು ಆತ್ಮವಿಶ್ವಾಸದಿಂದ ಬದುಕಬೇಕು ಅದಕ್ಕೆ ಕಾನೂನು ನೆರವಾಗಬಲ್ಲದು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಹಿರಿಯ ವಕೀಲರ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ ಫೋಕ್ಸೋ ಕಾಯಿದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾತನಾಡಿದರು.ಕಾನೂನು ಬಂಧನದಲ್ಲಿಲ್ಲ ಅದು ನಮಗೆ ರಕ್ಷಣೆ ಮಾತ್ರ .ದೌರ್ಜನ್ಯ ಕ್ಕೊಳಗಾದ ಮಕ್ಕಳನ್ನು ಕಾನೂನಿನ ಚೌಕಟ್ಟು ಹೇಗೆ ಕಾಯಬಲ್ಲದು ಮತ್ತು ಮಕ್ಕಳ ಆರೈಕೆ, ಸುರಕ್ಷತೆಯ ಕಾರಣದಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಕವಿ ದಿನಕರ ದೇಸಾಯಿಯವರ ಚುಟುಕುಗಳು ಮತ್ತು ಮಂಕುತಿಮ್ಮನ ಕಗ್ಗಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ., ಕಾನೂನಿನ ಅರಿವನ್ನು ವಿದ್ಯಾರ್ಥಿಗಳಿಗೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಹಿಸಿಕೊಂಡಿದ್ದರು. ಉಪನ್ಯಾಸಕಿಯರಾದ ಲಿಲ್ಲಿ ಪಿ.ವಿ. ಕಾರ್ಯಕ್ರಮವನ್ನು ನಿರೂಪಿಸಿ, ವಸಂತಿ ಪಿ. ಸ್ವಾಗತಿಸಿ, ಶಿಲ್ಪಾ ಡಿ. ವಂದಿಸಿದರು.