ಧರ್ಮಸ್ಥಳ: ಕ್ರೀಡಾ ಜೀವನ ಮಾನಸಿಕತೆಯನ್ನು ವೃದ್ಧಿಸುವಂತದ್ದಾಗಿದ್ದು, ಏಕಾಗ್ರತೆ, ಬುದ್ಧಿ ಮಟ್ಟ ಸದೃಢಗೊಳಿಸುವ ಕಾರ್ಯ ಗ್ರಾಮೀಣ ಕ್ರೀಡೆಯಲ್ಲಿದೆ. ಆದರೆ ಜೀವನ ಶೈಲಿ ಬದಲಾದಂತೆ ಇದನ್ನೆಲ್ಲ ಮರೆಯುತ್ತಿದ್ದೇವೆ. ಹಿಂದಿನ ಜೀವನ ಮತ್ತೆ ಮರುಕಳಿಸುವ ಉದ್ದೇಶವೇ ಎನೇಲ್ ಗೊಬ್ಬು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಲಾಯಿಲ, ಪ್ರಗತಿ ಬಂಧು ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಮತ್ತು ಲಾಯಿಲ ವಲಯ, ಜನಜಾಗೃತಿ ವೇದಿಕೆ, ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ವಲಯ ‘ಜನ ಜಾಗೃತಿ ಪರಿಷತ್ ಜಂಟಿ ಆಶ್ರಯದಲ್ಲಿ ಜು.28ರಂದು ಬೆಳ್ತಂಗಡಿ ಶ್ರೀ ಮಂ.ಆಂ.ಮಾ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಎನೇಲ್ ಗೊಬ್ಬು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಗೆ ಮೌಲ್ಯವನ್ನು ಕಟ್ಟಲು ಸಾದ್ಯವಿಲ್ಲ. ಹಿಂದಿನ ಜೀವನ ಶೈಲಿಯನ್ನು ಮರೆತು ಯಾವುದೇ ಅರ್ಥವಿಲ್ಲದ ಹಾದಿಯಲ್ಲಿ ನಾವೆಲ್ಲ ಸಾಗುತ್ತಿದ್ದೇವೆ. ಗ್ರಾಮೀಣ ಕ್ರೀಡಾಕೂಟ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಸಿ ಆಕರ್ಷಿತರಾಗುವಂತೆ ಮಾಡಬೇಕು. ಈ ನೆಲೆಯಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ 250 ತಾಲೂಕಿನಲ್ಲಿ ಗ್ರಾಮೀಣ ಕ್ರೀಡಾಕೂಟ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ, ತುಳು ಭಾಷೆಯ ಶ್ರೀಮಂತಿಕೆಯನ್ನು ಸಂಸ್ಕೃತಿಯನ್ನು ನಾವು ಬೆಳೆಸಬೇಕು. ಧರ್ಮಸ್ಥಳದ ಪುಣ್ಯ ಭೂಮಿಯಲ್ಲಿ ಆರಂಭಿಸಿದ ಯೋಜನೆಗಳೆಲ್ಲವೂ ರಾಜ್ಯಮಟ್ಟದಲ್ಲಿ ಇತಿಹಾಸ ಸೃಷ್ಟಿಸಿವೆ. ಮುಂದೆ ಗ್ರಾಮೀಣ ಕ್ರೀಡಾಕೂಟವು ಮನೆಮಾತಾಗಲಿ ಎಂದ ಅವರು, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸುವಲ್ಲಿ ನಮ್ಮೆಲ್ಲ ಹೋರಾಟ ಅಗತ್ಯವಾಗಿದ್ದು, ರಾಜ್ಯ ಸರಕಾರವು ಇದರೆಡೆ ಇಚ್ಛಾಶಕ್ತಿ ತೋರಿದೆ ಎಂದರು.
ನಿವೃತ್ತ ಸೈನಿಕ ಗಡಿಭದ್ರತಾ ಪಡೆ ಸಿಗ್ನಲ್ ರೆಜಿಮೆಂಟ್ ಗಣೇಶ್ ಬಿ.ಎಲ್., ಲಾಯಿಲ ವಲಯ ಪ್ರಗತಿ ಬಂಧು ಒಕ್ಕೂಟ ವಲಯ ಅಧ್ಯಕ್ಷ ಬಿ.ಎ.ರಜಾಕ್, ಬೆಳ್ತಂಗಡಿ ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಪುರುಷೋತ್ತಮ ಕನ್ನಾಜೆ, ಬೆಳ್ತಂಗಡಿ ಆಂ.ಮಾ.ಶಾಲೆಯ ಸಹ ಶಿಕ್ಷಕಿ ಪ್ರಮಿಳಾ ಉಪಸ್ಥಿತರಿದ್ದರು.ಲಾಯಿಲ ಪ್ರಗತಿಪರ ಕೃಷಿಕ ಎನೇಲ್ ಗೊಬ್ಬು ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಬೆಳ್ತಂಗಡಿ ಪ್ರಗತಿ ಬಂಧು ಸ್ವ.ಸ.ಸಂಘ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಸ್ವಾಗತಿಸಿದರು. ಸಚಿನ್ ಗೇರುಕಟ್ಟೆ ನಿರೂಪಿಸಿದರು.ಕ್ರೀಡಾಕೂಟವನ್ನು ವಿಜಯ್ ಅತ್ತಾಜೆ ನಡೆಸಿಕೊಟ್ಟರು.ಮಕ್ಕಳು, ಮಹಿಳೆಯರಿಗೆ, ಪುರುಷರಿಗೆ ಹಗ್ಗ-ಜಗ್ಗಾಟ, ನಿಧಿ ಹುಡುಕುವುದು, ಸಂಧಿ ಪಾಡ್ದನ, ಕಬಡ್ಡಿ, ತ್ರೋಬಾಲ್, ಗೂಟದ ಓಟ ಸಹಿತ ಮುಂತಾದ ಕ್ರೀಡಾ ಕೂಟ ನಡೆಯಿತು.