ಕಡಿರುದ್ಯಾವರ: ಆನೆ ಸಂತ್ರಸ್ತರ ಹೋರಾಟ ಸಮಿತಿ ಇದರ ಸಭೆಯು ಜು.27ರಂದು ಹೇಡ್ಯಾದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸಂತೋಷ್ ಗೌಡ ವಳಂಬ್ರ ಇವರು ವಹಿಸಿ ಮಾತನಾಡಿ ಕಡಿರುದ್ಯಾವರ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ನಿರಂತರ ಕಾಡಾನೆ ದಾಳಿಯಿಂದಾಗಿ ಆದ ನಷ್ಟದ ಬಗ್ಗೆ ಸವಿವರವಾಗಿ ಮಾತನಾಡಿದರು.
ಕಳೆದ ವರ್ಷಗಳಲ್ಲಿ ರಾತ್ರಿ ಹೊತ್ತು ಕೃಷಿ ನಾಶಮಾಡುತ್ತಿದ್ದ ಕಾಡಾನೆಗಳು ಈಗ ಹಗಲಲ್ಲೂ ಗ್ರಾಮದಲ್ಲಿ ಸಂಚರಿಸುತ್ತವೆ.ಇದರಿಂದ ಶಾಲಾ-ಮಕ್ಕಳು ಸೇರಿದಂತೆ ಗ್ರಾಮಸ್ಥರು ಹಗಲೂ ಹೊರಗಡೆ ತಿರುಗುವುದು ಕಷ್ಟವಾಗಿದೆ. ಅರಣ್ಯ ಇಲಾಖೆಯಿಂದ ಈ ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ನಮಗೆ ಕೃಷಿ ನಾಶಕ್ಕೆ ಪರಿಹಾರಕ್ಕಿಂತ ಆನೆಗಳಿಂದ ಕೃಷಿ ನಾಶವಾಗದಂತೆ ಶಾಶ್ವತ ಪರಿಹಾರ ಬೇಕು. ಇದಕ್ಕಾಗಿ ಆನೆಕಂದಕ ನಿರ್ಮಾಣ ಮಾಡಿ ಅದರ ಮೇಲೆ ಸೋಲಾರ್ ವಿದ್ಯುತ್ ಬೇಲಿ ರಚನೆ ಮಾಡಬೇಕು.
ಅರಣ್ಯ ಇಲಾಖೆ ನೀಡುವ ಪಟಾಕಿಯಿಂದ ಯಾವುದೇ ಪ್ರಯೋಜನವಿಲ್ಲ ಆತ್ಮರಕ್ಷಣೆ ಮತ್ತು ಕೃಷಿ ರಕ್ಷಣೆಗೆ ಕೋವಿ ಪರವಾಣಿಗೆ ನೀಡಬೇಕು. ಅವೈಜ್ಞಾನಿಕವಾಗಿ ಮಾಡಿರುವ ಜಲವಿದ್ಯುತ್ ಯೋಜನೆ, ಎತ್ತಿನಹೊಳೆ ಇತ್ಯಾದಿ ಯೋಜನೆಗಳಿಂದ ಸಾವಿರಾರು ಎಕರೆ ಅರಣ್ಯ ನಾಶದಿಂದ ಆನೆ ಇತ್ಯಾದಿ ಕಾಡುಪ್ರಾಣಿಗಳು ನಾಡಿಗೆ ನಿರಂತರ ಬರುವಂತಾಗಿದೆ ಎಂದರು.
ಗ್ರಾಮಸ್ಥರು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಮತ್ತು ಆನೆ ದಾಳಿಯಿಂದ ತಮ್ಮ ಕೃಷಿ ನಾಶದ ನೋವು ಎಲ್ಲರಲ್ಲೂ ಕಂಡುಬಂದಿತು. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂಬುದು ಎಲ್ಲರ ಅನಿಸಿಕೆಯಾಗಿತ್ತು.ವೇದಿಕೆಯಲ್ಲಿ ನಮ್ಮ ಹೋರಾಟಕ್ಕೆ ಅಡಿಪಾಯ ಹಾಕಿದ ಜೋರ್ಜ್ T.V ಮಲ್ಲಡ್ಕ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗೌಡ ಕುಚ್ಚೂರು ಕಾರ್ಯದರ್ಶಿ ರಾಮಚಂದ್ರ ಗೌಡ ಪನಿಕಲ್ಲು ಉಪಸ್ಥಿತರಿದ್ದರು.
ಸಂಚಾಲಕ ಕಿರಣ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.ವಿಘ್ನೇಶ್ ಪ್ರಭು ಆಲಂತಡ್ಕ ಸ್ವಾಗತಿಸಿ, ರಾಘವೇಂದ್ರ ಪಟವರ್ಧನ್ ಪನಿಕಲ್ಲು ಧನ್ಯವಾದ ಅರ್ಪಿಸಿದರು.