ಪಾದಾಚಾರಿಗಳಿಗೆ ಸಂಕಟ ತಂದೊಡ್ಡಿರುವ ನಾರ್ಯ-ಬೆಳಾಲು ರಸ್ತೆ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ದೊಂಡೊಲೆ, ನಾರ್ಯ ನಿವಾಸಿಗಳು ನಾರ್ಯ-ಬೆಳಾಲು ರಸ್ತೆಯನ್ನು ತಮ್ಮ ನಿತ್ಯ ಸಂಚಾರಕ್ಕೆ ಬಳಸುತ್ತಾರೆ. ನೇತ್ರಾವತಿಯಿಂದ ನಾರ್ಯ ಗ್ರಾಮದವರೆಗಿನ ಸುಮಾರು 3 ಕಿ.ಮೀ ದೂರದ ಈ ರಸ್ತೆ ಇದೀಗ ಪಾದಾಚಾರಿಗಳು, ದ್ವಿ-ಚಕ್ರ ಮತ್ತು ಲಘು ವಾಹನ ಚಾಲಕರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದು ನಿಂತು ರಸ್ತೆಗೆ ವ್ಯಾಪಿಸಿರುವ ಬೇಲಿ ಸಸ್ಯಗಳು ಮತ್ತು ಕಳೆ ಗಿಡಗಳು.

ನಾರ್ಯ – ಬೆಳಾಲು ರಸ್ತೆಯ ಎರಡೂ ಕಡೆಗಳಲ್ಲಿ ಸಾಕಷ್ಟು ಖಾಸಗಿ ಜಮೀನುಗಳು ಮತ್ತು ಸರ್ಕಾರಿ ಜಾಗಗಳಿವೆ. ಖಾಸಗೀ ಜಮೀನಿನವರು ತಮ್ಮ ಬೇಲಿಯನ್ನು ಭದ್ರಪಡಿಸುವುದಕ್ಕೋಸ್ಕರ ನೆಟ್ಟಿರುವ ಗಿಡಗಳು ಇದೀಗ ಬೇಲಿಯನ್ನು ದಾಟಿ ರಸ್ತೆಗೆ ವ್ಯಾಪಿಸಿವೆ. ಆದರೂ ಅದನ್ನು ತಮ್ಮದೇ ಜವಾಬ್ದಾರಿ ಎಂದರಿತು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮನಸ್ಸು ಮಾಡದೇ ಇರುವ ಕಾರಣ ಹಲವು ತಿರುವುಗಳಲ್ಲಿ ಎದುರಿಗೆ ಯಾವ ವಾಹನ ಬರುತ್ತಿದೆ ಎನ್ನುವುದು ಪಾದಾಚಾರಿ ಮತ್ತು ವಾಹನ ಸವಾರರಿಬ್ಬರಿಗೂ ಕಾಣದಂತಹ ಸ್ಥಿತಿಯಿದೆ. ಇದರಿಂದ ಎಷ್ಟೋ ಬಾರಿ ಅಪಘಾತಗಳಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂದಲೆಳೆಯ ಅಂತರದಲ್ಲಿ ಪಾದಾಚಾರಿಗಳು ಪಾರಾದ ಘಟನೆಗಳೂ ನಡೆದಿವೆ. ಇದೂ ಸಾಲದೆಂಬಂತೆ ಕೆಲವೊಂದು ವಾಹನ ಸವಾರರು ಈ ಗಿಡಗಂಟಿಗಳಿಂದ ಮರೆಯಾಗಿರುವ ತಿರುವುಗಳಲ್ಲು ಅತೀ ವೇಗದಿಂದ ಸಂಚರಿಸಿ ಪಾದಾಚಾರಿಗಳು ಮತ್ತು ದ್ವಿ-ಚಕ್ರ ವಾಹನಗಳ ಚಾಲಕರಿಗೆ ಪ್ರಾಣಾಪಾಯ ಒಡ್ಡಿದ ಘಟನೆಗಳೂ ನಡೆದಿವೆ.

ಎರಡು ಸರ್ಕಾರಿ ಬಸ್ಸುಗಳೂ ಸೇರಿದಂತೆ ಘನ ವಾಹನಗಳೂ ಇದೇ ರಸ್ತೆಯಲ್ಲಿ ಓಡಾಡುವುದರಿಂದ ಕೆಲವೊಮ್ಮೆ ವಾಹನಗಳು ಮುಖಾಮುಖಿಯಾದಾಗ ರಸ್ತೆಯಿಂದ ಕೆಳಗಿಳಿದು ದಾರಿ ಮಾಡಿಕೊಡಲಾಗದಷ್ಟು ಮಟ್ಟಿಗೆ ಇಲ್ಲಿ ಗಿಡ-ಗಂಟಿಗಳು, ಬೇಲಿ ಸಸ್ಯಗಳು ಹರಡಿ ನಿಂತಿವೆ. ಹೆಚ್ಚಿನ ಭಾಗಗಳಲ್ಲಿ ಮುಳ್ಳಿನ ಸಸ್ಯಗಳು ಬೆಳೆದು ರಸ್ತೆಗೆ ಚಾಚಿರುವುದರಿಂದ ಪಾದಾಚಾರಿಗಳು ರಸ್ತೆಯ ಅಂಚಿನಲ್ಲಿ ನಡೆಯಲಾಗದೇ ರಸ್ತೆ ಮಧ್ಯೆ ನಡೆಯುವ ಸ್ಥಿತಿಯಿದ್ದು ಇದು ಅಪಘಾತಗಳಾಗುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳೂ ಇದೇ ರಸ್ತೆಯನ್ನು ಬಳಸುತ್ತಾರೆ. ಕೆಲವೆಡೆ ಖಾಸಗೀ ಜಮೀನಿಂದ ಹರಿದು ಬಂದು ಕೆಸರು ರಸ್ತೆಯಲ್ಲಿ ಅಪಾಯಕಾರಿ ದಿಬ್ಬಗಳನ್ನು ಸೃಷ್ಟಿಸಿದ್ದು ರಾತ್ರಿ ವೇಳೆ ಇದನ್ನು ಗಮನಿಸದೇ ಬರುವ ದ್ವಿ-ಚಕ್ರ ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ.ಈ ದಿಬ್ಬಗಳಲ್ಲಿ ನೀರು ನಿಂತು ಕ್ರಮೇಣ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗುವ ಸಾಧ್ಯತೆಗಳು ಇವೆ. ಅಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಿಸಿದ್ದ ಕಣಿಗಳು ಕಳೆದ ವರ್ಷ ನಡೆದ ಕಾಮಗಾರಿಯೊಂದರಿಂದಾಗಿ ಮುಚ್ಚಿದ್ದು ಈಗ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು ರಸ್ತೆಯ ಆಯಸ್ಸನ್ನು ಕುಗ್ಗಿಸುವ ಸಂಭವವಿದೆ.
ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಪಂಚಾಯತ್ ವತಿಯಿಂದಲೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಅಪಾಯ ಸಂಭವಿಸುವ ಮೊದಲೇ ಇತ್ತ ಗಮನ ಹರಿಸಿ ಗಿಡ-ಗಂಟಿಗಳನ್ನು ಮತ್ತು ರಸ್ತೆಯಲ್ಲಿ ಸೃಷ್ಟಿಯಾಗಿರುವ ಮಣ್ಣ ದಿಬ್ಬಗಳನ್ನು ತೆರವುಗೊಳಿಸಿ ಪಾದಾಚಾರಿಗಳು ಮತ್ತು ದ್ವಿ-ಚಕ್ರ ವಾಹನ ಸವಾರರ ಜೀವ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here