ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧ ಅಪಪ್ರಚಾರ ಖಂಡನೀಯ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಮುಖ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿಗೆ ಸಾಂಸ್ಥಿಕ ಬಿ.ಸಿ.ಯಾಗಿ ಸೇವೆಸಲ್ಲಿಸುತ್ತಿದೆ. ದೇಶದಲ್ಲೇ ಅತಿ ದೊಡ್ಡ ಸ್ವಸಹಾಯ ಸಂಘ ಆರ್ಥಿಕ ಸೇರ್ಪಡೆಯನ್ನು ನಿರ್ವಹಿಸುವ ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆಯು ಗುರುತಿಸಿಕೊಂಡಿದೆ. ಯೋಜನೆಯ ಮೂಲಕ ಪಡೆದು ಕೊಂಡ ಸಾಲವನ್ನು ಕಟ್ಟಬೇಡಿ ಎಂದು ಕೆಲವು ಸಮಾಜ ಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಜನ ಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಹೇಳಿದರು. ಅವರು ಜೂ.26ರಂದು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರ್.ಬಿ.ಐ.ನ ನಿಯಮದಂತೆ ದೇಶದ ಪ್ರಮುಖ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿಗೆ ಸಾಂಸ್ಥಿಕ ಬಿ.ಸಿ.ಯಾಗಿ ಸೇವೆ ಸಲ್ಲಿಸುತ್ತಿದೆ. ದೇಶದಲ್ಲೇ ಅತಿ ದೊಡ್ಡ ಸ್ವ-ಸಹಾಯ ಸಂಘಗಳ ಆರ್ಥಿಕ ಸೇರ್ಪಡೆಯನ್ನು ನಿರ್ವಹಿಸುವ ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆಯು ಗುರುತಿಸಿಕೊಂಡಿದೆ. ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳಿಂದ ನೇರವಾಗಿ ಸಾಲ ಸೌಲಭ್ಯವನ್ನು ನೀಡುತ್ತಿರುವುದರಿಂದ ಶೇ. 13.5 ಬಡ್ಡಿದರದಲ್ಲಿ ಒಂದು ಸಂಘಕ್ಕೆ ಗರಿಷ್ಠ ರೂ. 25 ಲಕ್ಷದವರೆಗೆ ಸಾಲ ದೊರೆಯುತ್ತಿರುವುದು ದೇಶದಲ್ಲೇ ಒಂದು ಮಾದರಿ ಬಿ.ಸಿ. ವ್ಯವಸ್ಥೆಯಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಲ್ಲಿ 46,972 ಸ್ವ-ಸಹಾಯ ಸಂಘಗಳಿದ್ದು ರೂ. 2761 ಕೋಟಿ ಮೊತ್ತದ ಹೊರಬಾಕಿ ಇರುತ್ತದೆ.ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಅವಧಿಯ ಸ್ವಸಹಾಯ ಸಂಘಗಳು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಜಿಲ್ಲೆಗಳಲ್ಲಿವೆ. ಈ ಸಂಘಗಳು ಅತ್ಯುತ್ತಮವಾಗಿ ತಮ್ಮ ಸಂಘಗಳ ಗುಣಮಟ್ಟವನ್ನು ಕಾಯ್ದುಕೊಂಡ ಕಾರಣ ಸದಸ್ಯರ ಆರ್ಥಿಕ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಯೂ ಆಗಿರುತ್ತದೆ. ಕಿರು ಆರ್ಥಿಕ ಸಾಲ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳು ಲಾಭದಾಯಕ ಉದ್ದೇಶಿತ ಸಂಸ್ಥೆಗಳಾಗಿದ್ದರೆ, ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಮಾತ್ರ ‘ಚಾರಿಟೇಬಲ್ ಟ್ರಸ್ಟ್’ ಅಡಿಯಲ್ಲಿ ನೊಂದಾಯಿತವಾದ ಸಂಸ್ಥೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ‘ಚಾರಿಟೇಬಲ್ ಟ್ರಸ್ಟ್’ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಲಾಭ ಗಳಿಕೆಯ ಉದ್ದೇಶಿತ ಸಂಸ್ಥೆ ಆಗಿಲ್ಲ. ಬದಲಾಗಿ ತನ್ನ ಆದಾಯದಲ್ಲಿ ಮಿಗತೆ ಬಂದರೆ ಅದನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅರ್ಪಿಸುವ ಒಂದು ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯಾಗಿದೆ.
ಪ್ರಸ್ತುತ ವರ್ಷದಲ್ಲಿ ಪ್ರತಿ ತಿಂಗಳು 40 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು, 17 ಸಾವಿರ ವೃದ್ಧಾಪ್ಯ ಕಡುಬಡವರಿಗೆ ಪ್ರತಿ ತಿಂಗಳು ಮಾಸಾಶನವನ್ನು ನೀಡುತ್ತಿದೆ. ಈ ವರ್ಷ ಒಂದು ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ತುಂಬಿದೆ. ಕೆರೆ ಪುನರ್‌ಜ್ಜೀವನ, ವಾತ್ಸಲ್ಯ ಕಾರ್ಯಕ್ರಮ, ಶುದ್ಧಗಂಗಾ, ಹಿಂದೂ ರುದ್ರಭೂಮಿ ಯೋಜನೆ, ಶಾಲೆಗಳಿಗೆ ಪೀಠೋಪಕರಣ ಒದಗಣೆ, ಭಜನಾ ಮಂಡಳಿಗಳ ಪೋಷಣೆ, ಮದ್ಯವರ್ಜನ ಶಿಬಿರ, ವಿಕಲ ಚೇತನರಿಗೆ ಮತ್ತು ವೃದ್ಧರಿಗೆ ಸಲಕರಣೆ, ಪ್ರಾಕೃತಿಕ ವಿಕೋಪಗಳಿಗೆ ಧನಸಹಾಯ, ಕೃಷಿ ಅನುದಾನ ಕಾರ್ಯಕ್ರಮ, ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸಹಕಾರ ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷ ರೀತಿಯಲ್ಲಿ ಸಮಾಜ ಸೇವೆಯನ್ನು ಸಲ್ಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ‘ಪ್ರಗತಿರಕ್ಷಾ ಕವಚ’ ಮತ್ತು ‘ಸುರಕ್ಷಾ ವಿಮಾ ಯೋಜನೆ’ಗಳ ಮೂಲಕ ಬಡವರಿಗೆ ಜೀವವಿಮೆ ಭದ್ರತೆ ಹಾಗೂ ಆರೋಗ್ಯ ವಿಮಾ ಭದ್ರತೆಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗೆ ಗ್ರಾಮೀಣ ಕರ್ನಾಟಕದ ರೈತರ, ಬಡವರ, ಮಹಿಳೆಯರ ಕಲ್ಪವೃಕ್ಷವಾಗಿ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿದೆ.

ಕೆಲವು ತಿಂಗಳುಗಳಿಂದ ‘ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ’, ‘ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಇತ್ಯಾದಿ ಸುಳ್ಳು ಸುದ್ದಿಗಳನ್ನು ಗ್ರಾಮೀಣ ಮುಗ್ಧ
ಜನತೆಗೆ ಕೆಲವು ಸಮಾಜಘಾತುಕ ಶಕ್ತಿಗಳು ಮಾಡುತ್ತಿದ್ದಾರೆ. ಬಡಜನತೆಗೆ ಅತ್ಯಂತ ಅನುಕೂಲಗಳನ್ನು ಒದಗಿಸುತ್ತಿರುವ ಗ್ರಾಮಾಭಿವೃದ್ಧಿ ವ್ಯವಸ್ಥೆಯನ್ನು ಹಾಳುಮಾಡುವ ಸಮಾಜದ್ರೋಹಿ ಪ್ರಯತ್ನಗಳನ್ನು ಗಮನಿಸಿದ ಕರಾವಳಿ ಪ್ರದೇಶದ ಸಜ್ಜನರು ತೀವ್ರ ನೊಂದಿದ್ದಾರೆ. ಸಮಾಜಘಾತುಕ ಶಕ್ತಿಗಳ ಅಪಪ್ರಚಾರದ ಬಗ್ಗೆ ಸಂಘದ ಸದಸ್ಯರು, ಸಾರ್ವಜನಿಕರು ಈಗಾಗಾಲೇ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಿದ್ದಾರೆ.ಅಪಪ್ರಚಾರ ಮಾಡುತ್ತಿದ್ದ ಒಂದು ವ್ಯವಸ್ಥಿತ ಗುಂಪನ್ನು ಪಡುಬಿದ್ರೆಯ ಎಲ್ಲೂರಿನ ಜನತೆ ಪೊಲೀಸರಿಗೆ ಒಪ್ಪಿಸಿದ್ದು ಇತ್ತೀಚೆಗೆ ವರದಿಯಾಗಿದೆ.ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಆರ್ಥಿಕ ಕಣ್ಣುಗಳು. ಉಭಯ ಕರಾವಳಿ ಜಿಲ್ಲೆಯ ಸ್ವಸಹಾಯ ಸಂಘಗಳಿಗೆ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ‘ಬ್ಯಾಂಕ್ ಆಫ್ ಬರೋಡಾ’ದಿಂದ ಯೋಜನೆಯ ಮೂಲಕ ಬಿ.ಸಿ. ಮಾದರಿಯಲ್ಲಿ ಸಾಲ ದೊರೆಯುತ್ತಿದ್ದು ಇಂತಹ ಸಾಲಗಳನ್ನು ಕಟ್ಟಬೇಡಿ ಎಂದು ಪ್ರಚೋದನೆ ನೀಡುವುದು ಒಂದು ದೇಶದ್ರೋಹದ ಮತ್ತು ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವ ಕೃತ್ಯವಾಗಿದೆ ಎಂದು ಜನರು ಖಂಡಿಸಿದ್ದಾರೆ.

ಈ ಅಪಪ್ರಚಾರವನ್ನು ಅಷ್ಟಕ್ಕೇ ನಿಲ್ಲಿಸದೇ ಪೊಲೀಸ್ ಇಲಾಖೆಗಳ ಹೆಸರನ್ನು ಬಳಕೆ ಮಾಡಿ ಇಲಾಖೆಗೂ ಕೆಟ್ಟ ಹೆಸರು ತರುವ ಪ್ರಯತ್ನ ಕೆಲವು ದಿನಗಳ ಹಿಂದೆ ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯ ಎಸ್.ಪಿ ರವರೇ ಯೋಜನೆಯ ಸಾಲ ಕಟ್ಟಬೇಡಿ, ಬಡ್ಡಿ ಕಟ್ಟ ಬೇಡಿ ಎಂದು ಹೇಳಿದ್ದಾರೆಂದು ಹೀನ ಸುಳ್ಳು ಪ್ರಚಾರವನ್ನು ಸಮೂಹ ಮಾದ್ಯಮಗಳ ಮೂಲಕ ಕೆಲವು ಕಿಡಿಕೇಡಿಗಳು ಮಾಡುತ್ತಿದ್ದಾರೆ. ಈ ಸಲುವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಒಕ್ಕೂಟಗಳ ಪದಾಧಿಕಾರಿಗಳು, ಯೋಜನೆಯ ಅಧಿಕಾರಿಗಳು ಹಾಗೂ ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಗಳು ಉಡುಪಿ ಎಸ್.ಪಿ ರವರಾದ ಡಾ. ಅರುಣ್.ಕೆ ರವರಿಗೆ ಈ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡುತ್ತಿರುವ ಬಗ್ಗೆ ತಿಳಿಸಿ, ತಮ್ಮ ಇಲಾಖೆಗೂ ಕೆಟ್ಟ ಹೆಸರು ತರುತ್ತಿರುವ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದರು. ಇಂತಹ ಕಿಡಿಕೇಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದೂರನ್ನು ನೀಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ಎಸ್.ಪಿ ಯವರಿಗೆ ಯೋಜನೆಯು ಆರ್.ಬಿ.ಐ ನಿಯಮದಂತೆಯೇ ಬ್ಯಾಂಕಿನ ಬಿ.ಸಿ ಯಾಗಿ ಸ್ವ-ಸಹಾಯ ಸಂಘಗಳಿಗೆ ಹೇಗೆ ಬ್ಯಾಂಕಿನಿಂದ ಸಾಲಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಆರ್.ಬಿ.ಐ ನ ಸುತ್ತೋಲೆ ಎಸ್.ಬಿ.ಐ ಹಾಗೂ ಯೋಜನೆ ನಡುವಿನ ಬಿ.ಸಿ ಒಪ್ಪಂದದ ದಾಖಲೆಗಳನ್ನು ಒಪ್ಪಿಸಿದರು.

ಎಸ್.ಪಿ ಯವರಿಂದ ಸ್ಪಷ್ಟನೆ: ದೂರನ್ನು ಸ್ವೀಕರಿಸಿದ ಎಸ್.ಪಿ ರವರು ಯೋಜನೆಯ ಸಾಲವನ್ನು ಕಟ್ಟಬೇಡಿ, ಬಡ್ಡಿಯನ್ನು ಕಟ್ಟಬೇಡಿ ಎಂದು ನಾವು ಹೇಳಿಲ್ಲ, ಈ ಬಗ್ಗೆ ದೂರನ್ನು ಪರಿಶೀಲಿಸಿ, ಮುಂದಿನ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಘದ ಸದಸ್ಯರಿಗೆ,ಒಕ್ಕೂಟದ ಪದಾಧಿಕಾರಿಗಳಿಗೆ, ಎಸ್.ಬಿ.ಐ ಬ್ಯಾಂಕ್ ಅಧಿಕಾರಿಗಳಿಗೆ, ಯೋಜನೆಯ ಅಧಿಕಾರಿಗಳಿಗೆ ಭರವಸೆಯನ್ನು ನೀಡಿದರು.

ನಾರವಿ ಘಟನೆಗೂ ಯೋಜನೆಗೂ ಸಂಬಂಧವಿಲ್ಲ: ಮೊನ್ನೆ ನಾರವಿಯಲ್ಲಿ ಕೆಲವು ವ್ಯಕ್ತಿಗಳ ನಡುವೆ ವೈಯಕ್ತಿಕ ವಿಚಾರದಲ್ಲಿ ನಡೆದ ಘಟನೆಯನ್ನು ಯೋಜನೆಯ ಮೇಲೆ ಅಪಪ್ರಚಾರ ಮಾಡಲು ಬಳಸಿಕೊಳ್ಳುವಂತಹ ಹೀನ ಕೃತ್ಯಕ್ಕೆ ಈ ಸಮಾಜ ಘಾತುಕ ಶಕ್ತಿಗಳು ಕೈ ಹಾಕಿರುವವುದನ್ನು ಕೂಡಾ ಈ ವೇದಿಕೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಮೊನ್ನೆ ನಾರವಿಯಲ್ಲಿ ವೈಯಕ್ತಿಕ ವ್ಯವಹಾರಗಳ ವಿಚಾರದಲ್ಲಿ ಕೆಲವು ವ್ಯಕ್ತಿಗಳ ನಡುವೆ ವ್ಯವಹಾರಿಕ ಕಲಹಉಂಟಾಗಿದ್ದು, ಅವರು ಇರುವ ಭವಿಷ್ಯ ಸ್ವ-ಸಹಾಯ ಸಂಘದಲ್ಲಿ ಯಾವುದೇ ಕಂತುಬಾಕಿ ಇಲ್ಲ. ಸಂಘದಲ್ಲಿ ಕಂತುಬಾಕಿ ಇಲ್ಲದ ಮೇಲೆ ವಸೂಲಾತಿಗೆ ಯಾರು ಬೈಕ್ ಸೀಜ್ ಮಾಡುತ್ತಾರೆ? ಒಂದು ವೇಳೆ ಸಂಘದಲ್ಲಿ ಕಂತುಬಾಕಿ ಇದ್ದು, ಯೋಜನೆಯ ಕಾರ್ಯಕರ್ತರು ಹೀಗೆ ಮಾಡಿದ್ದಲ್ಲಿ ಅದು ತಪ್ಪಾಗುತ್ತಿತ್ತು. ಈ ಸಂಘದಲ್ಲಿ ಕಂತುಬಾಕಿ ಇಲ್ಲದೇ ಇರುವಾಗ ವಸೂಲಾತಿಯ ಪ್ರಶ್ನೆಯೇ ಇಲ್ಲ. ಯಾರೋ ವೈಯಕ್ತಿಕ ವಿಚಾರಗಳಿಗೆ ಕಲಹಗಳನ್ನು ಮಾಡಿಕೊಂಡರೆ ಅದನ್ನು ಕೆಲವರಿಗೆ ಪ್ರೇರಣೆ ನೀಡಿ ಯೋಜನೆ ಮೇಲೆ ಕೆಟ್ಟಹೆಸರು ತರುವ ಇಂತಹ ಹೀನ ಕೃತ್ಯಗಳನ್ನು ಖಂಡಿಸುತ್ತೇವೆ ಎಂದರು.

ಪತ್ರಿಕಾಗೊಷ್ಠಿಯಲ್ಲಿ ಜನಜಾಗೃತಿ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ಕಾರ್ಯದರ್ಶಿ ಮಹಾಬಲ ಕುಲಾಲ್, ಬಂಟ್ವಾಳ ಅಧ್ಯಕ್ಷ ರೋನಾಲ್ಡ್ ಡಿ’ಸೋಜಾ, ಜನಜಾಗೃತಿ ತಾಲೂಕು ಸಮಿತಿ ಅಧ್ಯಕ್ಷೆ ಶಾರದಾ ಆರ್ ರೈ, ಜನಜಾಗೃತಿ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಕಿಶೋರ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ಗೌಡ, ನಿಕಟಪೂರ್ವ ಅಧ್ಯಕ್ಷ ವೆಂಕಟರಾಯ ಅಡೂರು, ನಿಕಟಪೂರ್ವ ಅಧ್ಯಕ್ಷ ಡಿ.ಎ ರಹಿಮಾನ್, ಖಾಸೀಂ ಮಲ್ಲಿಗೆಮನೆ ಅಧ್ಯಕ್ಷರು, ಸುಳ್ಯ ಅಧ್ಯಕ್ಷ ಲೋಕನಾಥ ಅಮ್ಚೂರು, ಸುಳ್ಯ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ರೈ ಕಳೆಂಜ, ವಿಮಲಾ ರಂಗಯ್ಯ ನಿಕಟಪೂರ್ವ ಅಧ್ಯಕ್ಷರು ಸುಳ್ಯ, ಮಹಾಬಲ ರೈ ನಿಕಟಪೂರ್ವ ಅಧ್ಯಕ್ಷರು ಪುತ್ತೂರು, ಸಾಜ ರಾಧಕೃಷ್ಣ ಆಳ್ವ ನಿಕಟಪೂರ್ವ ಅಧ್ಯಕ್ಷರು ರಾಜ್ಯ ಸಲಹಾ ಸಮಿತಿ ಪುತ್ತೂರು, ಮಹೇಶ್ ಕೆ ಸವಣೂರು ಅಧ್ಯಕ್ಷರು, ಗೋಪಾಲ ಕೃಷ್ಣ ಅರಿಬೈಲು ನಿಕಟಪೂರ್ವ ಅಧ್ಯಕ್ಷರು, ಡಾ. ಜಯಪ್ರಕಾಶ್ ಮಂಜೆಶ್ವರ, ಸುಭಾಶ್ಚಂದ್ರ ಮೂಡಬಿದ್ರೆ, ಅಖಿಲೇಶ್ ನಗುಮುಗಂ ಕಾಸರಗೋಡು, ಮಾಧವ ಗೌಡ ಾಡಲಿತ ಯೊಜನಾಧಿಕಾರಿ ಬೆಳ್ತಂಗಡಿ, ಉಡುಪಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಬಜ್ಪೆ ತಾ.ಕಾ. ಕರುಣಾಕರ ಆಚಾರ್ಯ, ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಸುರೇಂದ್ರ, ತಾಲೂಕು ಕಾರ್ಯದರ್ಶಿ ದಯಾನಂದ ಪೂಜಾರಿ ಪಿ, ಬಾಲಕೃಷ್ಣ ಎಮ್ ತಾಲೂಕು ಕಾರ್ಯದರ್ಶಿ ಬಂಟ್ವಾಳ, ಸುನೀತಾ ತಾಲೂಕು ಕಾರ್ಯದರ್ಶಿ ಮೂಡಬಿದ್ರೆ, ಮೇದಪ್ಪ ಎನ್ ತಾಲೂಕು ಕಾರ್ಯದರ್ಶಿ ಕಡಬ, ಶಶಿಧರ್ ಎಮ್ ತಾಲೂಕು ಕಾರ್ಯದರ್ಶಿ ಪುತ್ತೂರು, ರಮೇಶ್ ತಾಲೂಕು ಕಾರ್ಯದರ್ಶಿ ವಿಟ್ಲ, ಮಾಧವ ತಾಲೂಕು ಕಾರ್ಯದರ್ಶಿ ಸುಳ್ಯ, ನಿತೇಶ್ ಜನಜಾಗೃತಿ ಮೇಲ್ವಿಚಾರಕ ಉಡುಪಿ, ಮಹೇಶ್ ಸವಣೂರು ಅಧ್ಯಕ್ಷ ಜನಜಾಗೃತಿ ವೇದಿಕ ಕಡಬ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here