ಬೆಳ್ತಂಗಡಿ: ಚರ್ಮಗಂಟು ರೋಗವು ವೈರಸ್ ನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು ಬಳಿಕ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಈ ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾದ್ಯತೆಹಿದ್ದು ಶೇಕಡಾ 2ರಿಂದ ಶೇಕಡಾ 5 ಜಾನುವಾರುಗಳು ಈ ರೋಗದಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಪ್ರತೀ ಜಾನುವಾರುಗಳಿಗೆ ಸಮಾರೋಪಾದಿಯಲ್ಲಿ ಜಿಲ್ಲೆಯಾದ್ಯಂತ ಜುಲೈ 2024ನೇ ಮಾಹೆಯಲ್ಲಿ ಚರ್ಮಗಂಟು ರೋಗದ ವಿರುದ್ದ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ.
ಲಸಿಕೆ ಹಾಕಲು ಸಿದ್ದಪಡಿಸಿದ ಚರ್ಮಗಂಟು ರೋಗದ ವಿರುದ್ದ ಲಸಿಕೆಯನ್ನು 4 ಗಂಟೆಯೊಳಗೆ ಜಾನುವಾರುಗಳಿಗೆ ನೀಡಬೇಕಾಗಿದ್ದು ಅಭಿಯಾನ ಸಂದರ್ಭದಲ್ಲಿ ಮಾತ್ರ ಲಸಿಕೆ ಲಭ್ಯವಿರುತ್ತದೆ. ಎಲ್ಲಾ ಜಾನುವಾರುಗಳಿಗೆ ಈ ಹಿಂದೆ ಲಸಿಕೆಯನ್ನು ಹಾಕಿಸಿದರೂ ಸಹಾ ಪ್ರತೀ ವರ್ಷ ಲಸಿಕೆ ಪುನರಾವರ್ತಿಸುವುದು ಅಗತ್ಯವಾಗಿದ್ದು ಹೈನುಗಾರರು ಈ ಬಾರಿಯೂ ಕೂಡ ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಿ ಬೆಳ್ತಂಗಡಿ ತಾಲೂಕಿನಲ್ಲಿರುವ ಜಾನುವಾರುಗಳನ್ನು ಚರ್ಮಗಂಟು ರೋಗದಿಂದ ರಕ್ಷಿಸಬೇಕು ಎಂದು ವಿನಂತಿಸಿದೆ.
ಈ ಬಗ್ಗೆ ಹೈನುಗಾರರು ಲಸಿಕೆಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸಂಪರ್ಕಿಸಿ ಸ್ಥಳೀಯ ಆಡಳಿತ ಹಾಗೂ ಪಶುಸಖಿಯವರಿಂದ ಮಾಹಿತಿ ಪಡೆಯುವಂತೆ ಬೆಳ್ತಂಗಡಿ ಮುಖ್ಯಪಶುವೈದ್ಯಾಧಿಕಾರಿ (ಆಡಳಿತ) ಪಶುಪಾಲನಾ ಇಲಾಖೆ ಪಶು ಆಸ್ಪತ್ರೆ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.