ಕಾಶಿಪಟ್ಣ: ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಲ್ಲಿಸುವ ಗೌರವ ಪ್ರೇರಣೆಯಾಗಿ ಮಾರ್ಪಡುತ್ತದೆ. ಆ ಮೂಲಕ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಊರ ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸಲು ಊರಿನ ಸಮಸ್ತ ನಾಗರೀಕರು ಏಕ ಮನಸ್ಸಿನಿಂದ ಶ್ರಮಿಸಬೇಕೆಂದು ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ., ಸ.ಪ್ರೌ.ಶಾಲೆ ಕಾಶಿಪಟ್ಣದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ನಡೆದ 2023-24ನೇ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿ ಕರೆ ನೀಡಿದರು.
ಅಂಡಿಂಜೆ ಶಾಲಾ ಮುಖ್ಯ ಶಿಕ್ಷಕ ಶಿವಶಂಕರ ಭಟ್ ಅಭಿನಂದನ ಭಾಷಣ ಮಾಡಿ ಶೇಕಡಾ 100 ಫಲಿತಾಂಶ ದಾಖಲಿಸಲು ಕಾರಣಕರ್ತರಾದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಿಶೇಷವಾಗಿ ಮಹತ್ತರ ಜವಾಬ್ದಾರಿ ನಿರ್ವಹಿಸಿದ ಪೋಷಕರನ್ನು ಪ್ರಶಂಸಿಸಿದರು. ನಂತರ ಶೇಕಡಾ 100 ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳನ್ನು, ಶ್ರಮಿಸಿದ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯವರನ್ನು ಗೌರವಿಸಲಾಯಿತು.
ಶಾಲಾ ಸುಣ್ಣ ಬಣ್ಣ ಮತ್ತು ಆಟದ ಮೈದಾನ ಸಮತಟ್ಟು ಕಾಮಗಾರಿಗೆ ಅನುದಾನ ನೀಡಿದ ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ ಮತ್ತು ಉಪಾಧ್ಯಕ್ಷೆ ಶುಭವಿ ಇವರನ್ನು ಶಾಲಾ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಯಶೋಧರ ಪೂಜಾರಿ ಶಾಲಾ ಪರವಾಗಿ ಗೌರವಿಸಿದರು.
ಇತ್ತೀಚೆಗೆ ಅಗಲಿದ ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಇವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಪ್ರಾರ್ಥನೆ ಮಾಡಲಾಯಿತು. ಸತೀಶ್ ಕೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶಿಲ್ಪಾ, ಪಂಚಾಯತ್ ಸದಸ್ಯರಾದ ಅಶೊಕ್ ಕುಮಾರ್ ಜೈನ್, ರವೀಂದ್ರ, ಪಿಡಿಒ ಆಶಾಲತಾ, ಕಾರ್ಯದರ್ಶಿ ಲೀನಾ ಬೆನಡಿಕ್ಟಾ ಲೋಬೋ, ಸಿ.ಆರ್.ಪಿ ಆರತಿ, ಶಾಲಾ ಸ್ಥಾಪಕ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಪ್ರವೀಣ್ ಪಿಂಟೋ, ಮಾವಿನಕಟ್ಟೆ ಶಾಲಾ ಮುಖ್ಯ ಶಿಕ್ಷಕ ಉಮೇಶ್ ನಾಯ್ಕ್, ಅಧ್ಯಾಪಕ ವೆಂಕಟೇಶ್ ನಾಯ್ಕ್, ಊರ ಹಿರಿಯರಾದ ಸುಬ್ಬಣ್ಣ ಪೂಜಾರಿ, ಸ್ಥಳೀಯ ಮಸೀದಿ ಅಧ್ಯಕ್ಷ ಕೆ.ಎಸ್ ಪುತ್ತುಮೋನು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕ ಶಶಿಧರ್ ಕೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಿಕ್ಷಕ ದೇವುದಾಸ್ ನಾಯಕ್ ನಿರೂಪಿಸಿ, ಶಿಕ್ಷಕಿ ಸೌಮ್ಯ ವಂದಿಸಿದರು.