ಪುದುವೆಟ್ಟು: ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಜೂ.05ರಂದು ಆಚರಿಸಲಾಯಿತು.
ಶಾಲೆಯಲ್ಲಿ ನಡೆದ ಈ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪುದುವೆಟ್ಟು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ ರೋಯಿ ಜೋಸೆಫ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪ ಗೌಡರವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಶಾಲೆಯ ಪರಿಸರದಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ರೋಯಿ ಜೋಸೆಫ್ ರವರು ಪರಿಸರ ನಾಶದಿಂದ ದೇಶದಲ್ಲಿ ಆಗುವ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಸುದೀರ್ಘವಾದ ಮಾಹಿತಿಯನ್ನು ನೀಡಿದರು.
ಶಾಲೆಯ ಶಿಕ್ಷಕ ಪವನ್ ಕುಮಾರ್ ರವರು ಪರಿಸರ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡರವರು ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆಗೆ ಸಂಬಂಧಪಟ್ಟ ಭಾಷಣ ಹಾಗೂ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.
ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಸುಜಾತಾ ರವರು ಸ್ವಾಗತಿಸಿ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶೀಲಾ ಎನ್ ರವರು ಧನ್ಯವಾದಿಸಿ, ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿಯಾದ ಪುಷ್ಪಲತಾ ನಿರೂಪಿಸಿದರು.