ಪಟ್ರಮೆ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳನ್ನು ಮತ್ತು ಈಗಾಗಲೇ ಕಲಿಯುತ್ತಿರುವ ವಿದ್ಯಾರ್ಥಿಗಳು ಸ್ವಾಗತಿಸುವ ವಿಶಿಷ್ಟವಾದ ಕಾರ್ಯಕ್ರಮದೊಂದಿಗೆ ಶಾಲಾ ಆರಂಭೋತ್ಸವವು ಮೇ 31ರಂದು ಜರಗಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹಣೆಗೆ ಕುಂಕುಮ ಹಚ್ಚಿ ಸಂಭ್ರಮದಿಂದ ಸ್ವಾಗತಿಸಿದರು. ಸೌತಡ್ಕದ ನೈಮಿಷ ಗ್ರೂಪ್ ಆಫ್ ಸ್ಪೈಸಸ್ ನ ಮಾಲಕ ಬಾಲಕೃಷ್ಣ ನೈಮಿಶ ವಿದ್ಯಾರ್ಥಿಗಳಿಗೆ ಸಿಹಿ ನೀಡಿದರು. ಬಳಿಕ ಅಗ್ನಿಹೋತ್ರ ಸರಸ್ವತಿ ವಂದನೆಯ ಮೂಲಕ ಶೈಕ್ಷಣಿಕ ವರ್ಷ 2024-25ರ ಮೊದಲ ದಿನವನ್ನು ಆರಂಭಿಸಲಾಯಿತು.
ವಿದ್ಯಾರ್ಥಿಗಳಿಗೆ ಪಾಠ ಪುಸ್ತಕ, ಬರೆಯುವ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಸದಸ್ಯರಾದ ದೇವಪಾಲ ಅಜ್ರಿ, ರಾಜೇಶ್ ರೈ ಪರಾರ್ತಿಮಾರು, ಪ್ರೇಮಾವತಿ ಕಲ್ಲಾಜೆ, ಕಿರಣ್ ಕೆ., ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್, ಸಹ ಶಿಕ್ಷಕರು, ಪೋಷಕರು ಶಾಲಾ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.