ಧರ್ಮಸ್ಥಳ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ, ವೃತ್ತಿಯಿಂದ ನಿವೃತ್ತರಾಗಲಿರುವ ಡಾ.ಎಲ್.ಎಚ್ ಮಂಜುನಾಥರವರನ್ನು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನವನ್ನು ನೆರವೇರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥರು ಮಾತನಾಡುತ್ತಾ, ಡಾ.ಎಲ್.ಎಚ್ ಮಂಜುನಾಥರವರು ಓರ್ವ ಉತ್ತಮ ಓದುಗರೂ ಬರಹಗಾರರೂ ಆಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ, ಬೆಳ್ತಂಗಡಿ ತಾಲೂಕಿನಿಂದ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತಿ ಹೆಚ್ಚು ಆಜೀವ ಸದಸ್ಯರಾಗಿ ನೋಂದಣಿಯಾಗುವಲ್ಲಿ ಕಾರಣರಾದವರು. ಅಲ್ಲದೆ ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ ಮಾರ್ಗದರ್ಶನದೊಂದಿಗೆ ಸಹಕಾರ ನೀಡಿದವರು. ಇವರ ಸಾಮಾಜಿಕ ಮತ್ತು ಸಾಹಿತ್ಯಕ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ತಾಲೂಕಿನ ಅಧ್ಯಕ್ಷ ಡಿ.ಯದುಪತಿ ಗೌಡ, ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಕೋಶಾಧ್ಯಕ್ಷ ಡಿ.ಧರ್ಣಪ್ಪ ಮತ್ತು ಉಜಿರೆ ಶ್ರೀ ಧ.ಮ.ಕಾಲೇಜಿನ ಉಪನ್ಯಾಸಕ ಡಾ.ಡಿ.ಎ.ನಾಗಣ್ಣ ಉಪಸ್ಥಿತರಿದ್ದರು.