ಅಕ್ರಮ ಕಲ್ಲು ಗಣಿಗಾರಿಕೆ- ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ- ಅಕ್ರಮ ಕಲ್ಲು ಗಣಿಗಾರಿಕೆ-ಬಂಧನ ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಶಾಸಕ ಪೂಂಜ- ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಿಂದಿಸಿ ಬೆದರಿಸಿದ ಆರೋಪದಡಿ ಕೇಸು ದಾಖಲು

0

ಬೆಳ್ತಂಗಡಿ: ಮೇಲಂತ ಬೆಟ್ಟು ಗ್ರಾಮದ ಮೂಡಲದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾಗಿರುವ ಗುರುವಾ ಯನಕೆರೆ ನಿವಾಸಿ ಶಶಿರಾಜ್ ಶೆಟ್ಟಿ(೩೫ವ)ಯವರನ್ನು ಮೇ ೧೮ರಂದು ಬಂಧಿಸಲಾಗಿದೆ. ಬಂಧಿತ ಶಶಿರಾಜ್ ಶೆಟ್ಟಿಯವರನ್ನು ಮೇ ೧೯ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ ಪ್ರಮೋದ್ ದಿಡುಪೆ ಎಂಬವರು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಮಧ್ಯೆ ಶಶಿರಾಜ್ ಶೆಟ್ಟಿಯವರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಮತ್ತು ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೇ ೧೮ರಂದು ಮಧ್ಯರಾತ್ರಿ ಪೊಲೀಸ್ ಠಾಣೆಯಲ್ಲಿ ತನ್ನ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವಾಚ್ಯವಾಗಿ ನಿಂದಿಸಿ ಬೆದರಿಸಿದ ಆರೋಪದಡಿ ಮೇ ೧೯ರಂದು ಪ್ರಕರಣ ದಾಖಲಾಗಿದೆ.
ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ ಆರೋಪದಡಿ ಶಶಿರಾಜ್ ಶೆಟ್ಟಿ ಬಂಧನ: ತಹಶೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸರು ಮೇ ೧೮ರಂದು ಮೇಲಂತಬೆಟ್ಟು ಗ್ರಾಮದ ಮೂಡಲದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಒಂದು ಹಿಟಾಚಿ, ಒಂದು ಟ್ರ್ಯಾಕ್ಟರ್, ಜೀವಂತ ೪ ಮದ್ದುಗುಂಡು ಹಾಗೂ ಬಳಕೆಯಾಗಿರುವ ೪ ಮದ್ದು ಗುಂಡುಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ವಶಕ್ಕೆ ಪಡೆದು ಕೊಳ್ಳಲಾಗಿತ್ತು. ಕಲ್ಲು ಗಣಿಗಾರಿಕೆ ಸ್ಥಳದಲ್ಲಿದ್ದ ಕಾರ್ಮಿಕರನ್ನು ಅಧಿಕಾರಿ ಗಳು ವಿಚಾರಿಸಿದ್ದಾಗ ಅವರು ಕಲ್ಲು ಗಣಿಗಾರಿಕೆಯನ್ನು ಪ್ರಮೋದ್ ದಿಡುಪೆ ಹಾಗೂ ಶಶಿರಾಜ್ ಅವರು ನಡೆಸುತ್ತಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಮೋದ್ ಮತ್ತು ಶಶಿರಾಜ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತಹಶೀಲ್ದಾರ್ ಪೃಥ್ವಿ ಸಾನಿಕಂರವರ ದೂರಿನಂತೆ ಪ್ರಮೋದ್ ಹಾಗೂ ಶಶಿರಾಜ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೫೬/೨೦೨೪ರಂತೆ ಕಲಂ ೯ಬಿ(೧)(ಬಿ) ಸ್ಫೋಟಕಗಳ ಕಾಯ್ದೆ ೧೮೮೪ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಕಲಂ ೫ ೧೯೦೮ರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಮೋದ್ ಮತ್ತು ಶಶಿರಾಜ್ ಶೆಟ್ಟಿಯವರನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು. ಪ್ರಮೋದ್ ತಲೆ ಮರೆಸಿಕೊಂಡಿದ್ದರು. ಶಶಿರಾಜ್ ಶೆಟ್ಟಿಯವರ ಮನೆಗೆ ದಾಳಿ ನಡೆಸಿದ್ದ ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದರು. ಕಾರ್ಯಕ್ರಮದ ನಿಮಿತ್ತ ಕಳೆಂಜ ನಂದಗೋಕುಲ ಗೋಶಾಲೆಯಲ್ಲಿದ್ದ ಶಶಿರಾಜ್ ಶೆಟ್ಟಿಯವರು ತಮ್ಮ ಮನೆಗೆ ಪೊಲೀಸರು ದಾಳಿ ನಡೆಸಿದ ವಿಚಾರ ಗೊತ್ತಿದ್ದರೂ ಕಳೆಂಜದಿಂದ ತಮ್ಮ ಮನೆಗೆ ಬಂದಿದ್ದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು. ಬಂಧಿತ ಶಶಿರಾಜ್ ಶೆಟ್ಟಿಯವರನ್ನು ರಾತ್ರಿ ಇಡೀ ಠಾಣೆಯಲ್ಲಿಟ್ಟುಕೊಂಡ ಪೊಲೀಸರು ಮೇ ೧೯ರಂದು ಮಧ್ಯಾಹ್ನ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ಶಶಿರಾಜ್ ಶೆಟ್ಟಿ ಪರ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹಾಜರಿದ್ದರು. ಈ ವೇಳೆ ನ್ಯಾಯಾಧೀಶರು ಶಶಿರಾಜ್ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು. ಬಳಿಕ ಶಶಿರಾಜ್‌ರವರನ್ನು ಮಂಗಳೂರು ಜೈಲಿನಲ್ಲಿರಿಸಲಾಗಿದೆ. ಶಶಿರಾಜ್ ಶೆಟ್ಟಿಯವರ ಜಾಮೀನು ಅರ್ಜಿ ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು ಶಶಿರಾಜ್ ಪರ ಮಂಗಳೂರಿನ ಖ್ಯಾತ ವಕೀಲ ಶಂಭು ಶರ್ಮ ವಕಾಲತ್ತು ವಹಿಸಿದ್ದಾರೆ.
ಶಶಿರಾಜ್ ಶೆಟ್ಟಿ ಪರ ಠಾಣೆಯಲ್ಲಿ ಪ್ರತಿಭಟಿಸಿದ ಶಾಸಕ ಹರೀಶ್ ಪೂಂಜ ವಿರುದ್ಧ ಕೇಸು ದಾಖಲು: ಶಶಿರಾಜ್ ಶೆಟ್ಟಿಯವರನ್ನು ಪೊಲೀಸರು ಬಂಧಿಸಿರುವ ಮಾಹಿತಿ ಪಡೆದ ಶಾಸಕ ಹರೀಶ್ ಪೂಂಜ ಅವರು ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್ ಸಹಿತ ತಮ್ಮ ಬೆಂಬಲಿಗರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೇ ೧೮ರಂದು ಮಧ್ಯರಾತ್ರಿ ಭೇಟಿ ನೀಡಿದರು. ಶಶಿರಾಜ್ ಶೆಟ್ಟಿಯವರನ್ನು ಪೊಲೀಸರು ವಿನಾಕಾರಣ ಬಂಧಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ಏಜಂಟರಂತೆ ವರ್ತಿಸಿದ್ದಾರೆ. ಯಾವುದೇ ದಾಖಲೆಯಿಲ್ಲದೆ ಪತ್ನಿ, ಮಕ್ಕಳು, ಮನೆಮಂದಿ ಎದುರೇ ರಾತೋರಾತ್ರಿ ಬಂಧಿಸಿ ದರ್ಪ ತೋರಲಾಗಿದೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ ಶಾಸಕ ಹರೀಶ್ ಪೂಂಜ ಅವರು ಪೊಲೀಸರನ್ನು ತರಾಟೆತ್ತಿಕೊಂಡರು. ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಶಾಸಕರು ಪೊಲೀಸ್ ಸ್ಟೇಷನ್ ನಿಮ್ಮ ಅಪ್ಪಂದ ಎಂದೂ ಪ್ರಶ್ನಿಸಿದರು. ಈ ವೇಳೆ ಅಲ್ಲ ಪೊಲೀಸ್ ಸ್ಟೇಷನ್ ಸಾರ್ವಜನಿಕರದ್ದು ಎಂದು ಪೊಲೀಸರು ಹೇಳಿದರು. ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಧ್ಯರಾತ್ರಿ ೧೨.೩೦ರಿಂದ ಮುಂಜಾನೆ ೫ ಗಂಟೆಯವರೆಗೂ ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆ ಒಳಗಡೆ ಶಾಸಕರು ಧರಣಿ ನಡೆಸಿದರು. ಈ ವೇಳೆ ಎಸ್‌ಐ ಮುರಳೀಧರ ನಾಯ್ಕ್ ಮತ್ತು ಸಿಬ್ಬಂದಿಗಳು ಠಾಣೆಯಲ್ಲಿದ್ದರು. ಹರೀಶ್ ಪೂಂಜ ಅವರು ಪೊಲೀಸರನ್ನು ಏರುಧ್ವನಿಯಲ್ಲಿ ತರಾಟೆಗೆತ್ತಿಕೊಳ್ಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಆಗುತ್ತಿದ್ದಂತೆಯೇ ಪೊಲೀಸರು ಶಾಸಕ ಹರೀಶ್ ಪೂಂಜ ವಿರುದ್ಧ ಮೇ ೧೯ರಂದು ಪ್ರಕರಣ ದಾಖಲಿಸಿಕೊಂಡರು.
ಮಾಧ್ಯಮ ಪ್ರಕಟಣೆ: ಬಳಿಕ ಮಾಧ್ಯಮ ಪ್ರಕಟಣೆ ಹೊರಡಿಸಿದ ಪೊಲೀಸ್ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಸದ್ರಿ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ ಅಪಾಯಕಾರಿ ಸ್ಪೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ಶೆಟ್ಟಿ ಎಂಬವರುಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಿನಾಂಕ ೧೮.೦೫.೨೦೨೪ ಅ.ಕ್ರ. ೫೬/೨೦೨೪ರಂತೆ ಕಲಂ ೯ಬಿ(೧)(ಬಿ) ಸ್ಫೋಟಕಗಳ ಕಾಯ್ದೆ ೧೮೮೪ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಕಲಂ ೫ ೧೯೦೮ರಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪೈಕಿ ಶಶಿರಾಜ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಶಿರಾಜ್ ಪರವಾಗಿ ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾರವರು ಇತರ ಕೆಲವು ಜನರೊಂದಿಗೆ ದಿನಾಂಕ ಮೇ.೧೮ರಂದು ರಾತ್ರಿ ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ ಆತನನ್ನು ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ ಅವಾಚ್ಯವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವರ್ತನೆ ತೋರಿರುತ್ತಾರೆ. ಈ ಬಗ್ಗೆ ಶಾಸಕರಾದ ಹರೀಶ್ ಪೂಂಜಾರವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. ೫೭/೨೦೨೪ರಂತೆ ಕಲಂ ೩೫೩ ಮತ್ತು ೫೦೪ ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದರು.
ಪ್ರತಿಭಟನೆಗೆ ನಿರ್ಧಾರ: ಬಳಿಕ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಂಧಿಸಿರುವುದನ್ನು ವಿರೋಧಿಸಿ ಮೇ ೨೦ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿತು. ಈ ಬಗ್ಗೆ ವೆಬ್ ಮಾಧ್ಯಮ ಸಹಿತ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಯಿತು. ಪ್ರತಿಭಟನೆಯ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಗೆ ನಿಬಂಧ ವಿಧಿಸಲು ನಿರ್ಧರಿಸಿದರು. ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಘೋಷಣೆ ಹೊರಡಿಸಿದರಲ್ಲದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು. ಇದನ್ನು ಲೆಕ್ಕಿಸದ ಶಾಸಕ ಹರೀಶ್ ಪೂಂಜ ಸಹಿತ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಮೇ ೨೦ರಂದು ಬೆಳಿಗ್ಗೆ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿದರು.

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಪ್ರಮೋದ್
ತಲೆ ಮರೆಸಿಕೊಂಡಿರುವ ದಿಡುಪೆಯ ಪ್ರಮೋದ್ ಅವರು ನಿರೀಕ್ಷಣಾ ಜಾಮೀನು ಪಡೆಯಲು ಮಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

p>

LEAVE A REPLY

Please enter your comment!
Please enter your name here