ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ- ಪರಿಸರ ಸಂರಕ್ಷಣೆ ಸ್ವಚ್ಛತೆಯಿಂದ ಪ್ರಾರಂಭವಾಗಬೇಕು: ಡಾ.ಡಿ.ವೀರೇಂದ್ರ ಹೆಗ್ಗಡೆ

0

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ಪ್ರಾದೇಶಿಕ ವಿಭಾಗ, ರಂಗಶಿವ ಕಲಾ ತಂಡ ಧರ್ಮಸ್ಥಳ, ಯುವತಿ ಮಂಡಲ ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಮತ್ತು ಗುರುವಾಯನಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ನದಿ ಮತ್ತು ಪ್ರಧಾನ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸ, ಪ್ಲಾಸ್ಟಿಕ್, ಕಡ್ಡಿಗಳನ್ನು ಸ್ವಚ್ಛ ಮಾಡುವ ಉದ್ದೇಶದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ 400ಕ್ಕೂ ಮಿಕ್ಕಿದ ‘ಶೌರ್ಯ’ ಸ್ವಯಂಸೇವಕರು, ಯೋಜನೆಯ ಕಾರ್ಯಕರ್ತರು, ಭಕ್ತಾಭಿಮಾನಿಗಳು, ಗ್ರಾಮಸ್ಥರು., ಮತ್ತಿತರ ಸೇವಾರ್ಥಿಗಳು ಭಾಗವಹಿಸಿದ್ದರು. ಬೆಳಿಗ್ಗೆ ೯.೦೦ರಿಂದ ಮಧ್ಯಾಹ್ನ 12.30 ರವರೆಗೆ ಈ ಶ್ರಮದಾನ ನಡೆಸಲಾಗಿದ್ದು, ಎಲ್ಲರೂ ಬಹಳ ಆಸಕ್ತಿಯಿಂದ ಸೇವೆ ನೀಡಿರುತ್ತಾರೆ.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೇಂದ್ರಕಛೇರಿಯಲ್ಲಿ ಮಾನ್ಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ರವರ ಉಪಸ್ಥಿತಿಯಲ್ಲಿ ಸ್ವಯಂಸೇವಕರ ಸಭೆ ನಡೆಸಲಾಯಿತು. ಈ ಸಭೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡುತ್ತಾ, ‘ತ್ಯಾಗಕ್ಕೆ ಸಿದ್ಧರಾಗುವ ಪಡೆಯೇ ‘ಶೌರ್ಯ’ ತಂಡವಾಗಿದೆ. ಆಪತ್ತು ಬಂದಾಗ ಸಹಕರಿಸುವವನು ದೇವರಿಗೆ ಸಮಾನ. ಧನ, ಧಾನ್ಯ, ಸಂಪತ್ತು ಶಾಶ್ವತವಲ್ಲ. ಸೇವಾ ಮನೋಭಾವನೆಯಿಂದ ಸಂಪಾದಿಸಿದ ಪುಣ್ಯ ಶಾಶ್ವತವಾಗಿದೆ. ಇತರರ ಸೇವೆ ಮಾಡುವ ಅವಕಾಶ ಶೌರ್ಯ ತಂಡದಿಂದ ಲಭಿಸಿದ್ದು, ಭಗವಂತನಿಗೆ ಪ್ರಿಯವಾದ ಸೇವೆಯನ್ನು ಮಾಡುವುದರ ಮೂಲಕ ಆತ್ಮ ತೃಪ್ತಿ ಪಡೆಯಬಹುದು.

ವಿಪತ್ತು ನಿರ್ವಹಣೆ ಸುಲಭವಲ್ಲ. ಅಪಾಯ ಬರದ ಹಾಗೆ ನೋಡಿಕೊಳ್ಳುವುದೂ ಅತೀ ಮುಖ್ಯವಾಗಿದೆ. ನಮ್ಮ ಜೀವ ಕಾಪಾಡಿ ಇನ್ನೊಬ್ಬರ ಜೀವರಕ್ಷಣೆಯ ನ್ನು ಮಾಡಬೇಕು. ಧೈರ್ಯ, ಸಾಹಸ ಹೊಂದಿರುವವರಿಗೆ ಮಾತ್ರ ಶೌರ್ಯದಲ್ಲಿ ಕೆಲಸ ಮಾಡಲು ಸಾಧ್ಯ. ಮಾನಸಿಕ ಸಂಕಲ್ಪ, ದೈಹಿಕ ಶಕ್ತಿ ಮತ್ತು ದೇವರ ಅನುಗ್ರಹ ಇದ್ದಾಗ ಮಾತ್ರ ಈ ಕೆಲಸ ಮಾಡಬಹುದು. ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ. ನಾವು ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಒಳ್ಳೆಯ ಗಾಳಿ, ಉತ್ತಮ ಆರೋಗ್ಯ, ಪ್ರಶಾಂತತೆಯ ವಾತಾವರಣವನ್ನು ಕೊಡುವ ಈ ಪ್ರಕೃತಿಯನ್ನು ನಾವೆಲ್ಲರೂ ಪ್ರೀತಿಸಬೇಕು. ಪಾಶ್ಚಾತ್ಯ ದೇಶಗಳಲ್ಲಿ ನಾವು ಕಾಣುವ ಸ್ವಚ್ಛತೆ ವಿಶೇಷವಾದುದು. ಇಂದಿನ ಕಾರ್ಯಕ್ರಮಕ್ಕೆ ಹಾಜರಾಗಿ ಸೇವೆ ನೀಡಿದ ಸರ್ವರಿಗೂ ಒಳಿತಾಗಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್.ರವರು ‘ಶೌರ್ಯ’ ತಂಡದ ಕಾರ್ಯ ವೈಖರಿಯ ವರದಿಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರು ಮಾತನಾಡಿ ‘ರಾಜ್ಯಾದ್ಯಂತ 90 ತಾಲೂಕುಗಳಲ್ಲಿ 10300 ಸ್ವಯಂಸೇವಕರು ಹೊಂದಿರುವ ಶೌರ್ಯ ತಂಡವಿದೆ. ಒಟ್ಟು 3 ಲಕ್ಷಕ್ಕೂ ಮಿಕ್ಕಿದ ವಿಪತ್ತು, ಸಾಮಾಜಿಕ ಸೇವೆಗಳನ್ನು ನೀಡಿ 11 ಲಕ್ಷಕ್ಕೂ ಮಿಕ್ಕಿದ ಮಾನವ ದಿನಗಳನ್ನು ಈ ಸ್ವಯಂಸೇವಕರು ಧಾರೆ ಎರೆದು ಸೇವೆ ನೀಡಿದ್ದಾರೆ’ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ನಿರ್ದೇಶಕ ಮಹಾಬಲ ಕುಲಾಲ್, ಯೋಜನಾಧಿಕಾರಿ ಜೈವಂತ್ ಪಟಗಾರ್, ಮಾಧವ ಗೌಡ, ಕಿಶೋರ್ ಕುಮಾರ್, ಸುರೇಂದ್ರ, ದಯಾನಂದ, ದೇವಳ ಕಛೇರಿಯ ಪ್ರಬಂಧಕ ರಾಜೇಂದ್ರದಾಸ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.ಕಸ ವಿಲೇವಾರಿಗಾಗಿ ಡಿಎಂಸಿ ಧರ್ಮಸ್ಥಳದ ವತಿಯಿಂದ ಲಾರಿ, ಟ್ರಾಕ್ಟರ್, ಗೋಣಿ ಚೀಲಗಳು, ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಸುಬ್ರಹ್ಮಣ್ಯ ಪ್ರಸಾದ್, ಸಭಾ ಕಾರ್ಯಕ್ರಮದ ವ್ಯವಸ್ಥೆಯನ್ನು ಚಂದ್ರಶೇಖರ್ ಶೆಟ್ಟಿ, ಸಮಗ್ರ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವೀರು ಶೆಟ್ಟಿಯವರು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here