ಬೆಳ್ತಂಗಡಿ: ಪೊಲೀಸರಿಗೆ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಲು ಬೆಳ್ತಂಗಡಿ ಪೊಲೀಸರು ಆಗಮಿಸಿದ್ದು, ಬಿಜೆಪಿ ನಾಯಕರು ಮತ್ತು ವಕೀಲರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಡಿವೈಎಸ್ಪಿ ವಿಜಯಪ್ರಸಾದ್ ಬಾಗಿಲು ಮುಚ್ಚಿ ಮನೆಯೊಳಗೆ ಮಾತುಕತೆ ನಡೆಸುತ್ತಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹಾಗೂ ಮಂಗಳೂರಿನಿಂದ ಆಗಮಿಸಿರುವ ವಕೀಲರಾದ ಶಂಭು ಶರ್ಮಾ, ಅಜಯ್ ಸುವರ್ಣ ಮನೆಯೊಳಗಿದ್ದು, ಬಾಗಿಲು ಮುಚ್ಚಿ ಮಾತುಕತೆ ನಡೆಯುತ್ತಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಬ್ರಪುರ ಮಠ್ ಸಿಬ್ಬಂದಿಯೊಂದಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಸಕರ ಗರ್ಡಾಡಿಯ ಮನೆಗೆ ತೆರಳಿದ್ದು, ಬಳಿಕ ಡಿವೈಎಸ್ಪಿ ವಿಜಯಪ್ರಸಾದ್ ಕೂಡ ಆಗಮಿಸಿದ್ದಾರೆ. ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸುವುದಕ್ಕೆ ವಕೀಲರು ಮತ್ತು ಬಿಜೆಪಿ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ಅರೆಸ್ಟ್ ಮೆಮೊ ಸಹಿತ ಏನೂ ಇಲ್ಲದೆ ಬಂಧಿಸಲು ಅವಕಾಶವಿಲ್ಲ. ನೋಟಿಸ್‌ನಲ್ಲಿ ದಿನಾಂಕ ತಪ್ಪಾಗಿದೆ. ಎಫ್ಐಆರ್ ಪ್ರತಿ ಸಿಕ್ಕಿಲ್ಲ ಎಂದು ವಕೀಲರು ವಾದಿಸುತ್ತಿದ್ದಾರೆ.
ಭಾರಿ ಬಂದೋಬಸ್ತ್: ಶಾಸಕರ ಮನೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮನೆಯ ಹೊರಗಡೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದು, ಮಳೆಯಲ್ಲಿ ಒದ್ದೆಯಾಗಿಕೊಂಡೇ ಶಾಸಕ ಬಂಧನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.