ಸುಳ್ಳು-‌ ಮೋಸ‌ ಅಳಿಯಲಿ, ಸತ್ಯ- ನ್ಯಾಯ ಉಳಿಯಲಿ ಧರ್ಮಸ್ಥಳದಲ್ಲಿ “ಕಿಂದರಿಜೋಗಿ”ಯ ಅಪರೂಪದ ರಂಗಪ್ರಯೋಗ

0

ಬೆಳ್ತಂಗಡಿ: ಧರ್ಮಸ್ಥಳದ ವಸಂತ ಮಹಲಿನಲ್ಲಿ ಮಂಗಳವಾರ ರಾತ್ರಿ ಇಲಿಗಳು ಚುಂಯಿಗುಟ್ಟುತ್ತಿದ್ದವು. ಇಲಿಗಳ ಕಾಟಕ್ಕೆ ಊರವರೆಲ್ಲ ಕಂಗೆಟ್ಟಿದ್ದರು. ಊರ ಗೌಡ ಏನೇ ಮಾಡಿದರೂ ಇಲಿಗಳ ಕಾಟದಿಂದ ಮುಕ್ತಿ ಸಿಗಲಿಲ್ಲ. ಕೊನೆಗೆ ಕಿಂದರಿಜೋಗಿ ಬಂದು ಇಲಿಗಳನ್ನು ನಾಶ ಮಾಡಿದರೂ, ಕೊಟ್ಟ ಮಾತಿಗೆ ತಪ್ಪಿ ಗೌಡ ವಚನ ಭ್ರಷ್ಟನಾಗುತ್ತಾನೆ. ಅದಕ್ಕೆ ತಕ್ಕ ಶಿಕ್ಷೆಯೂ ಆಗುತ್ತದೆ. ಕೊನೆಗೆ, ಸುಳ್ಳು-‌ ಮೋಸ‌ ಅಳಿಯಲಿ, ಸತ್ಯ- ನ್ಯಾಯ ಉಳಿಯಲಿ. ಉಪಕಾರ ಮಾಡಿದವರಿಗೆ ಅಪಕಾರ ಮಾಡಬಾರದು ಎಂಬ ಸಂದೇಶ.

ಇದು ಶ್ರೀಕ್ಷೇತ್ರ ಧರ್ಮಸ್ಥಳದ ‘ರಂಗಶಿವ’ ಕಲಾಬಳಗ ಪ್ರಸ್ತುತಪಡಿಸಿದ ಕಿಂದರಿಜೋಗಿ ಮಕ್ಕಳ ನಾಟಕದ ಸನ್ನಿವೇಶಗಳು.

ರಾಬರ್ಟ್ ಬ್ರೌನಿಂಗ್ ರಚನೆಯ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯನ್ನು 1926ರಲ್ಲಿ ಕುವೆಂಪು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಎಂದು ಭಾವಾನುವಾದ ಮಾಡಿದಾಗ ಭಾರಿ ಜನಪ್ರಿಯವಾಗಿತ್ತು. ಇದೇ ಪದ್ಯವನ್ನು ಈಗ ಹೇಮಾವತಿ ವೀ. ಹೆಗ್ಗಡೆಯವರು ನಾಟಕದ ರೂಪ ನೀಡಿದ್ದಾರೆ.

ಮಕ್ಕಳೇ ಕಲಾವಿದರು: ಕಿಂದರಿಜೋಗಿ ನಾಟಕ ನಿರ್ದೇಶಿಸಿದ್ದು ನೀನಾಸಂ ಪದವೀಧರ ಸುನೀಲ್ ಶೆಟ್ಟಿ ಕಲ್ಕೊಪ್ಪ. ಧರ್ಮಸ್ಥಳದ ಎಸ್.ಡಿ.ಎಂ. ಶಾಲೆಗಳ 43 ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಕೇವಲ 13 ದಿನ ತರಬೇತಿ ನೀಡಿ ‘ಕಿಂದರಿಜೋಗಿ’ ನಾಟಕವನ್ನು ಪ್ರದರ್ಶಿಸಲಾಯಿತು.

ಸಹಜ ಅಭಿನಯ: ಅಯ್ಯೋ.. ಈ ಹಾಳಾದ ಇಲಿಗಳು.. ಈ ಸಂಭಾಷಣೆಯಲ್ಲೇ ಮಕ್ಕಳು ಪ್ರೇಕ್ಷಕರನ್ನು ಮೋಡಿ ಮಾಡಿದರು. ಈಗಿನ ವ್ಯವಸ್ಥೆಯ ಭ್ರಷ್ಟಾಚಾರ, ಸುಳ್ಳು, ಮೋಸ, ವಚನ ಭ್ರಷ್ಟತೆಯನ್ನು ಸೂಚ್ಯವಾಗಿ ರಂಗರೂಪದಲ್ಲಿ ಪ್ರದರ್ಶಿಸುವ ಸವಾಲನ್ನು ಮಕ್ಕಳು ಸಮರ್ಥವಾಗಿ ನಿಭಾಯಿಸಿರುವುದರ ಹಿಂದೆ ರಂಗಶಿವ ಕಲಾಬಳಗದ ಶ್ರಮ ಎದ್ದು ಕಾಣುತ್ತಿತ್ತು.

ಶೇ.90ರಷ್ಟು ಮಕ್ಕಳು ರಂಗಕ್ಕೆ ಹೊಸಬರಾದರೂ, ಅವರನ್ನು ಪಳಗಿಸಿದ ರೀತಿ, ಕೃತಕತೆ ಇಲ್ಲದ ಸಹಜಾಭಿನಯ, ಮೊನಚಾದ ಸಂಭಾಷಣೆಗಳು, ವೇಷಭೂಷಣ, ಅಲಂಕಾರ ಎಲ್ಲವೂ ಗಮನ ಸೆಳೆಯಿತು. ಗೌಡ ಪಾತ್ರಧಾರಿ ಬಾಲಕನಂತೂ ವೃತ್ತಿಪರ ಕಲಾವಿದನಂತೆ ಅಭಿನಯಿಸಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡ. ಹಿನ್ನೆಲೆ ಗಾಯನ, ಸಂಗೀತ, ನೆರಳು-ಬೆಳಕಿನಾಟವೂ ಮೆಚ್ಚುಗೆ ಗಳಿಸಿತು.

ನಾಟಕವನ್ನು ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ವರ್ಮ, ಪೂರನ್ ವರ್ಮ ಮತ್ತಿತರರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

p>

LEAVE A REPLY

Please enter your comment!
Please enter your name here