ತೆಕ್ಕಾರು: ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ರೆಕಾರ್ಡ್ ಆಗಿದ್ದ ವೆಬ್‌ಕ್ಯಾಮ್ ಕಳವು

0

ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಅಳವಡಿಸಿದ್ದ ವೆಬ್ ಕ್ಯಾಮರಾವನ್ನು ಸಿಮ್, ಮೆಮೊರಿ ಕಾರ್ಡ್ ಸಮೇತ ಕಳವು ಮಾಡಿರುವ ಕುರಿತು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಏ.24ರಂದು ಈ ವೆಬ್ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಏ.26ರಂದು ರಾತ್ರಿ 8 ಗಂಟೆಯವರೆಗಿನ ದೃಶ್ಯಗಳು ಇದರಲ್ಲಿ ಸೇವ್ ಆಗಿತ್ತು. ಇಡೀ ಮತದಾನ ಪ್ರಕ್ರಿಯೆ ರೆಕಾರ್ಡ್ ಆಗಿದ್ದು, ಅದರಲ್ಲಿದ್ದ ಮೆಮೊರಿ ಕಾರ್ಡ್‌ನಲ್ಲಿ ಸೇವ್ ಆಗಿತ್ತು. ಕ್ಯಾಮರಾ ಹಾಗೂ ಚುನಾವಣಾ ಧ್ವಜವನ್ನು ಅಪರಿಚಿತರು ಕಳವು ಮಾಡಿದ್ದಾರೆ ಎಂದು ತೆಕ್ಕಾರು ಗ್ರಾಮ ಪಂಚಾಯತ್‌ನ ಸಿಬ್ಬಂದಿ, ಬೂತ್ ಲೆವೆಲ್ ಅಧಿಕಾರಿ (ಬಿ.ಎಲ್.ಒ) ಮಹಮ್ಮದ್ ಸಿಹಾಬ್ ಇವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮತದಾನ ಪ್ರಕ್ರಿಯೆ ಚಿತ್ರೀಕರಣ: ಮತದಾನ ದಿನದ ಎಲ್ಲ ಪ್ರಕ್ರಿಯೆ ಈ ವೆಬ್‌ಕ್ಯಾಮ್‌ನಲ್ಲಿ ಚಿತ್ರೀಕರಣವಾಗಿದ್ದು, ಎಲ್ಲವೂ ಸೇವ್ ಆಗಿತ್ತು. ಸುಮಾರು 10,600 ರೂ. ಬೆಲೆ ಬಾಳುವ ಈ ಕ್ಯಾಮರಾದಲ್ಲೇ ಸಿಮ್, ಮೆಮೊರಿ ಕಾರ್ಡ್ ಅಳವಡಿಸಲಾಗಿತ್ತು.

ಚುನಾವಣೆಯ ಬಳಿಕ ಎರಡು ದಿನ ಸರಕಾರಿ ರಜೆ ಇದ್ದು, ಏ.29ರಂದು ಮಧ್ಯಾಹ್ನ ತಾಲೂಕು ಚುನಾವಣಾ ಶಾಖೆಯಿಂದ ಬಂದ ಸೂಚನೆಯಂತೆ ವೆಬ್ ಕ್ಯಾಮರಾವನ್ನು ವಿಎ ಕಚೇರಿಗೆ ನೀಡಲು ಪಂಚಾಯತ್ ಸಿಬ್ಬಂದಿ ಸಂಜೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಹಳೇ ಬಾಗಿಲಿಗೆ ಲಾಕ್ ಇದ್ದರೂ, ದೂಡಿ ಬೂತ್ ಒಳಗೆ ಅಳವಡಿಸಿದ್ದ ಕ್ಯಾಮರಾ ಕಳವು ಮಾಡಿರುವುದು ಕಂಡುಬಂದಿದೆ. ಒಳಗಿದ್ದ ಕೇಬಲ್‌ಗಳನ್ನು ಕತ್ತರಿಸಲಾಗಿದೆ. ಸೋಲಾರ್ ಲೈಟ್ ಸಹಿತ ಇತರ ವಯರುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಆದರೆ, ಕೇಬಲ್, ಸೋಲಾರ್ ಲೈಟ್ ಅಥವಾ ಪೀಠೋಪಕರಣಗಳನ್ನು ಕಳವು ಮಾಡಿಲ್ಲ. ಶಾಲೆಯ ಆವರಣದಲ್ಲಿ ಅಳವಡಿಸಲಾಗಿದ್ದ ಸ್ವೀಪ್ ಸಮಿತಿ ನೀಡಿದ ಚುನಾವಣಾ ಧ್ವಜವನ್ನು ಕಳವು ಮಾಡಲಾಗಿದೆ.

ಮಂಗಳವಾರ ಬೆಳಗ್ಗೆ ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಮಂಗಳೂರಿನಿಂದ ಬೆರಳಚ್ಚು ತಜ್ಞರು ಭೇಟಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here