ಉಜಿರೆ ಮೆಸ್ಕಾಂ ಉಪ ವಿಭಾಗದಿಂದ ವಿದ್ಯುತ್ ಕಂಬಗಳ ಸ್ಥಳಾಂತರ

0

ಉಜಿರೆ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಉಜಿರೆ ಮೆಸ್ಕಾಂ ಉಪ ವಿಭಾಗದ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಆರಂಭಿಸಲಾಗಿದೆ.

ಉಜಿರೆ-ಬೆಳ್ತಂಗಡಿ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಅವರ ನಿರ್ದೇಶನದಂತೆ ಸೋಮಂತಡ್ಕ ಶಾಖೆಯ ಜೆಇ ಕೃಷ್ಣೇಗೌಡ ಮತ್ತು ತಂಡದವರ ನೇತೃತ್ವದಲ್ಲಿ ಕೆಲಸ ನಡೆಯುತ್ತಿದೆ.
ಕಾಮಗಾರಿ ನಡೆಯುವ ಸ್ಥಳಗಳಲ್ಲಿರುವ ವಿದ್ಯುತ್ ಕಂಬಗಳನ್ನು ಹಂತ ಹಂತವಾಗಿ ಸ್ಥಳಾಂತರಗೊಳಿಸಲಾಗುತ್ತಿದೆ. ಗ್ರಾಹಕರಿಗೆ ವಿದ್ಯುತ್ ಪೂರೈಕೆಗೆ ತೊಂದರೆಯಾಗದಂತೆ ವಾರದ ಕೆಲವು ದಿನಗಳಲ್ಲಿ ನಿಗದಿತ ಗಂಟೆಗಳಲ್ಲಿ ಮಾತ್ರ ವಿದ್ಯುತ್ ಸ್ಥಗಿತಗೊಳಿಸಿ ಅಗತ್ಯ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದೆ.

ಈ ಕಾಮಗಾರಿಗೆ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಸಹಕಾರ ನೀಡುತ್ತಿದ್ದು,ಮೆಸ್ಕಾಂ ಜತೆ ಹೆದ್ದಾರಿ ಕಾಮಗಾರಿಯ ಕಾರ್ಮಿಕರು ಕೈಜೋಡಿಸುತ್ತಿದ್ದಾರೆ.ಇದರಿಂದ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಕಾಮಗಾರಿ ವೇಳೆ ವಾಹನ ಸಂಚಾರಕ್ಕೂ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕಿದೆ.ಪ್ರಸ್ತುತ ಸಂಚಾರಕ್ಕೆ ಅಡ್ಡಿ ನೀಡುವ ಕಂಬಗಳ ಸ್ಥಳಾಂತರದ ಬಳಿಕ ಇತರೆಡೆಯ ಕಂಬಗಳ ಸ್ಥಳಾಂತರ ನಡೆಯಲಿದೆ.
ಸಾಕಷ್ಟು ಸಮಸ್ಯೆಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮಳೆ ಇಲ್ಲದಿದ್ದರೆ ವಿಪರೀತ ಧೂಳು, ಮಳೆ ಬಂದರೆ ಜಾರುವ ರಸ್ತೆಯಿಂದ ವಾಹನ ಸವಾರರು ಹೈರಾಣರಾಗುತ್ತಿದ್ದಾರೆ. ಉತ್ತಮ ಮಳೆ ಸುರಿದರೆ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೂ ಸಮಸ್ಯೆಯಾಗಲಿದೆ.

11 ಕೋಟಿ ರೂ.ವೆಚ್ಚ: ಬೆಳ್ತಂಗಡಿ ಹಾಗೂ ಉಜಿರೆ ಉಪ ವಿಭಾಗದಲ್ಲಿ ಮದ್ದಡ್ಕದಿಂದ ಚಾರ್ಮಾಡಿ ತನಕ ರಸ್ತೆ ವ್ಯಾಪ್ತಿಯಲ್ಲಿರುವ ವಿದ್ಯುತ್ ಲೈನ್ ನ ಸ್ಥಳಾಂತರಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೆಸ್ಕಾಂಗೆ 11 ಕೋಟಿ ರೂ.ಪಾವತಿಸಿದೆ. ಬೆಳ್ತಂಗಡಿ ವ್ಯಾಪ್ತಿಯಲ್ಲಿ 555 ವಿದ್ಯುತ್ ಕಂಬ, 20 ಪರಿವರ್ತಕ ಹಾಗೂ 33 ಕೆವಿಯ ಎರಡು ವಿದ್ಯುತ್ ಟವರ್ ಸ್ಥಳಾಂತರಕ್ಕೆ 2.24ರೂ. ವೆಚ್ಚವಿದೆ. ಈಗಾಗಲೇ ಇಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಅಂತಿಮ ಹಂತದಲ್ಲಿದೆ. ಟವರ್ ಗಳ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ.

ಉಜಿರೆ ಉಪ ವಿಭಾಗದಲ್ಲಿ 1,029 ವಿದ್ಯುತ್ ಕಂಬ 108 ಪರಿವರ್ತಕ 33ಕೆವಿಯ 34 ವಿದ್ಯುತ್ ಟವರ್ ಗಳು ಸೇರಿ 8.75ಕೋಟಿ ರೂ.ವೆಚ್ಚದಲ್ಲಿ ಸ್ಥಳಾಂತರಗೊಳ್ಳಬೇಕಿವೆ. ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿ ಆರಂಭಗೊಂಡಿದ್ದು ಹೆದ್ದಾರಿ ಅಭಿವೃದ್ಧಿಗಾಗಿ ಒಟ್ಟು 1,584 ವಿದ್ಯುತ್ ಕಂಬ 128 ಪರಿವರ್ತಕ ಹಾಗೂ 36 ಟವರ್ ಗಳು ಸ್ಥಳಾಂತರಗೊಳ್ಳಲಿವೆ.

ಮರ ತೆರವು: ಹೆದ್ದಾರಿ ಅಭಿವೃದ್ಧಿಗೆ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಸ್ತೆ ಬಗೆ ಇರುವ ಮರಗಳು ತೆರವುಗೊಳ್ಳಬೇಕಿದ್ದು ಮಡಂತ್ಯಾರು, ಬೆಳ್ತಂಗಡಿ ಉಪ ಅರಣ್ಯ ವಲಯಗಳಲ್ಲಿ ಮರಗಳ ತೆರವು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಉಜಿರೆ,ಚಿಬಿದ್ರೆ, ಚಾರ್ಮಾಡಿ ಉಪ ವಲಯಗಳಲ್ಲಿ ಮರಗಳ ತೆರೆವು ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಇಲ್ಲಿ ಮರಗಳು ತೆರವುಗೊಳ್ಳದಿರುವುದು ವಿದ್ಯುತ್ ಕಂಬಗಳ ಸ್ಥಳಾಂತರ ಸಮಸ್ಯೆ ನೀಡುತ್ತಿದೆ. ಹೆದ್ದಾರಿ ಅಭಿವೃದ್ಧಿಗಾಗಿ ಒಟ್ಟು 3,000ಕ್ಕಿಂತ ಅಧಿಕ ಮರಗಳು ತೆರವುಗೊಳ್ಳಲಿದ್ದು,ಕೆಲವೆಡೆ ಮತ್ತೊಮ್ಮೆ ವಿದ್ಯುತ್ ಕಂಬಗಳ ಸ್ಥಳಾಂತರ ನಡೆಸಬೇಕಾದ ಅನಿವಾರ್ಯತೆ ಇದೆ.

LEAVE A REPLY

Please enter your comment!
Please enter your name here