ಬೆಳ್ತಂಗಡಿ ಬಸದಿಯಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

0

ಬೆಳ್ತಂಗಡಿ: ಜೈನಧರ್ಮವು ಗುಣಪ್ರಧಾನ ಮತ್ತು ಕರ್ಮಪ್ರಧಾನ ಧರ್ಮವಾಗಿದೆ. ವ್ಯಕ್ತಿಪ್ರಧಾನ ಧರ್ಮ ಅಲ್ಲ ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಎ.21ರಂದು ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ ಸಂದರ್ಭ ಮಂಗಲ ಪ್ರವಚನ ನೀಡಿದರು.

ಅಹಿಂಸೆ ಜೈನ ಧರ್ಮದ ಶ್ರೇಷ್ಠ ತತ್ವವಾಗಿದೆ. ಭಗವಾನ್ ಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಸತ್ಯ, ಅಚೌರ್ಯ,  ಬ್ರಹ್ಮಚರ್ಯ, ಅಪರಿಗ್ರಹ ಮೊದಲಾದ  ಪಂಚಾಣುವ್ರತಗಳನ್ನು ನಿತ್ಯವೂ ಪಾಲನೆ ಮಾಡಬೇಕು. ಜೀವನ ಪರ್ಯಂತ ಒಂದು ವ್ರತವನ್ನಾದರೂ ಕಟ್ಟುನಿಟ್ಟಾಗಿ ಪಾಲಿಸಬೇಕು.

ಸದಾ ಉತ್ತಮ ಭಾವನೆಯಿಂದ ಕರ್ತವ್ಯ ನಿಷ್ಠೆಯಿಂದ ಧರ್ಮ ಪ್ರಭಾವನ ಕಾರ್ಯ ಮಾಡಿದಾಗ ಜೀವನ ಪಾವನವಾಗುತ್ತದೆ. ಮಹಾವೀರರು ಬೋಧಿಸಿದ ತತ್ವ ಸಿದ್ಧಾಂತಗಳು ಸಾರ್ವಕಾಲಿಕ ಮೌಲ್ಯ ಹೊಂದಿದ್ದು ವಿಶ್ವಮಾನ್ಯವಾಗಿವೆ. ಮೋಕ್ಷ ಪ್ರಾಪ್ತಿಯೇ ಜೀವನದ ಪರಮ ಗುರಿಯಾಗಿರಬೇಕು ಎಂದರು.

ವೃದ್ಧಾಪ್ಯದಲ್ಲಿ ತಾಯಿಯ ಶುಶ್ರೂಷೆಯನ್ನು ನಿಷ್ಠೆಯಿಂದ ಮಾಡುತ್ತಿರುವ ಹೊಸಮೊಗ್ರು ರಾಜೇಶ್ ಮತ್ತು ವನಿತಾ ರಾಜೇಶ್ ಅವರನ್ನು ಗೌರವಿಸಲಾಯಿತು.

ಬಸದಿಯ ಸ್ವಚ್ಛತೆ, ನಿರ್ವಹಣೆ ಮತ್ತು ಆಡಳಿತ ಕ್ರಮದ ಬಗ್ಗೆ ಅನುವಂಶಿಕ ಆಡಳಿತ  ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಅವರನ್ನು ಸ್ವಾಮೀಜಿ ಅಭಿನಂದಿಸಿ ಆಶೀರ್ವದಿಸಿದರು.

ಡಾ.ಕೆ.ಜೀವಂಧರ ಬಳ್ಳಾಲ್, ಕೆ.ರಾಜವರ್ಮ ಬಳ್ಳಾಲ್, ಸುಮತಿ ಆರ್.ಬಳ್ಳಾಲ್, ಡಾ.ಆರ್.ಮಾಲತಿ, ವಿನಯ ಜೆ.ಬಳ್ಳಾಲ್, ಡಾ.ಪ್ರಿಯಾ ಬಳ್ಳಾಲ್, ಕೆ.ಪ್ರಸನ್ನ ಕುಮಾರ್ ದಿಲೀಪ್ ಬಳ್ಳಾಲ್, ಎಂ.ಜಿನರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಧರಣೇoದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. 

LEAVE A REPLY

Please enter your comment!
Please enter your name here