ಸಮಾನ ಮನಸ್ಕ ಬ್ರಾಹ್ಮಣರ ವೇದಿಕೆಯ ನೇತೃತ್ವದಲ್ಲಿ ಸಭೆ- ಕೋಮುವಾದದ ವಿರುದ್ಧ ಧ್ವನಿ ಎತ್ತಿದ ಬ್ರಾಹ್ಮಣ ಮುಖಂಡರು- ಕೀಳು ಮಟ್ಟದ ಬೆದರಿಕೆಯ ವಿರುದ್ಧ ಸಮರ ಸಾರಲು ನಿರ್ಧಾರ

0

ಮಂಗಳೂರು: ಸಮಾನ ಮನಸ್ಕ ಬ್ರಾಹ್ಮಣ ವೇದಿಕೆಯ ನೇತೃತ್ವದಲ್ಲಿ ದ.ಕ. ಜಿಲ್ಲೆಯ ನೂರಕ್ಕೂ ಅಧಿಕ ಬ್ರಾಹ್ಮಣ ಮುಖಂಡರು ಮಂಗಳೂರು ನಗರದ ದೀಪ ಕಂಫರ್ಟ್‌ನಲ್ಲಿ ಸಭೆ ನಡೆಸಿದ್ದಾರೆ. ಧಾರ್ಮಿಕ ಅಸಹಿಷ್ಣುತೆ, ಕೋಮುವಾದ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ವಿಚಾರದ ವಿರುದ್ಧ ಸಭೆಯಲ್ಲಿ ಬ್ರಾಹ್ಮಣ ಮುಖಂಡರು ಧ್ವನಿ ಎತ್ತಿದ್ದಾರೆ. ಕರಾವಳಿಯಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಾದರೂ ಅವರ ರಾಜಕೀಯ ಪ್ರಭಾವ ಜೋರಾಗಿಯೇ ಇದೆ.

ಬ್ರಾಹ್ಮಣರೆಲ್ಲರೂ ಬಿಜೆಪಿಗರು ಮತ್ತು ಕೋಮುವಾದಿಗಳು ಎಂಬ ಹಣೆಪಟ್ಟಿಯ ವಿರುದ್ಧ ಸಂದೇಶ ರವಾನಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಿದ ಮುಖಂಡರು ಬಿಜೆಪಿಯನ್ನು ಬೆಂಬಲಿಸದವರು ಬ್ರಾಹ್ಮಣರೇ ಅಲ್ಲ, ಹಿಂದೂಗಳೇ ಅಲ್ಲ ಎಂಬುವ ಕೀಳುಮಟ್ಟದ ಬೆದರಿಕೆಯ ವಿರುದ್ಧ ಸಮರ ಸಾರಬೇಕು ಎಂದು ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯ ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ಖಂಡಿತ ಹೊಸರೂಪ ನೀಡಲಿದೆ ಎಂದು ಸಭೆಯಲ್ಲಿ ಒಕ್ಕೊರಳ ಅಭಿಪ್ರಾಯ ವ್ಯಕ್ತವಾಗಿದ್ದು ಬಡತನದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸುವ ಯೋಜನೆ ರೂಪಿಸಲೂ ನಿರ್ಧರಿಸಲಾಗಿದೆ.

ನಾವು ಸಂಕುಚಿತರಾಗುವ ಪ್ರಶ್ನೆಯೇ ಇಲ್ಲ-ಶ್ರೀಧರ ಬಿಡೆ: ಅಧ್ಯಕ್ಷತೆ ವಹಿಸಿದ್ದ ಜಿಲ್ಲೆಯ ಪ್ರಭಾವಿ ನಾಯಕರಾದ ಬೆಳ್ತಂಗಡಿರು ಶ್ರೀಧರ ಭಿಡೆ ಅವರು ಬ್ರಾಹ್ಮಣರು ಅಂದರೆ ದೇಶದ ಸಮಗ್ರ ಜನರನ್ನೂ ಪ್ರೀತಿಸುವ ಮತ್ತು ಸಮಾಜದ ಸುಧಾರಣೆಯ ನಾಯಕತ್ವವನ್ನು ವಹಿಸಿದವರು. ಹಿಂದೂ, ಮುಸ್ಲಿಂ ಸಂತ ಪರಂಪರೆಯನ್ನೂ ಬೆಳೆಸಿದವರು. ನಾವು ಸಂಕುಚಿತರಾಗುವ ಪ್ರಶ್ನೆಯೇ ಇಲ್ಲ ಎಂದರು.

ಸತ್ಯ ಸಂದೇಶ ನೀಡುವ ಕಾರ್ಯ ನಡೆಸುವುದು ಅಗತ್ಯ-ಪ್ರೊ. ರಾಜಾರಾಮ ತೋಳ್ಪಾಡಿ: ಖ್ಯಾತ ಚಿಂತಕ ಪ್ರೊ. ರಾಜಾರಾಮ ತೋಳ್ಪಾಡಿ ಮಾತನಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಬರುತ್ತಿರುವಾಗ ಸಮಾನ ಮನಸ್ಕ ಬ್ರಾಹ್ಮಣರು ಆ ನಿಟ್ಟಿನಲ್ಲಿ ತಮ್ಮ ಸಮುದಾಯಕ್ಕೆ ಸತ್ಯ ಸಂದೇಶ ನೀಡುವ ಕಾರ್ಯ ನಡೆಸುವುದು ಅಗತ್ಯ ಎಂದರು.

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪರಿಸ್ಥಿತಿ ಉಳಿಯಬೇಕು-ಟಿ.ಆರ್.ಭಟ್: ಬ್ಯಾಂಕ್ ನೌಕರ ಸಂಘದ ಹಿರಿಯ ನಾಯಕ ಟಿ.ಆರ್.ಭಟ್ ಮಾತನಾಡಿ ಬ್ರಾಹ್ಮಣರೆಲ್ಲರೂ ನಿರ್ದಿಷ್ಟ ಸಿದ್ಧಾಂತ ಮತ್ತು ಪಕ್ಷಕ್ಕೇ ಸೇರಬೇಕು ಅಥವಾ ಸೇರಿದ್ದಾರೆ ಎಂಬ ನಿಲುವಿನ ವಿರುದ್ಧ ನಾವು ಮಾತನಾಡಲೇಬೇಕು, ದೇಶದ ಆಗುಹೋಗುಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪರಿಸ್ಥಿತಿ ಉಳಿಯಬೇಕು ಎಂದು ಹೇಳಿದರು.

ಸರಿಯಾದ ರೀತಿಯಲ್ಲೇ ಉತ್ತರ ನೀಡುತ್ತೇವೆ-ಎಂ.ಜಿ.ಹೆಗಡೆ: ಕಾರ್ಯಕ್ರಮದ ಸಂಘಟಕ ಎಂ.ಜಿ. ಹೆಗಡೆ ಮಾತನಾಡಿ ಬಿಜೆಪಿ ಮತ್ತು ಕೋಮು ಸಂಘಟನೆಗಳನ್ನು ಬೆಂಬಲಿಸದ ಬ್ರಾಹ್ಮಣರಿಗೆ ಕೌಟುಂಬಿಕ ಕಿರುಕುಳ ನೀಡುವುದು, ಸಾರ್ವಜನಿಕವಾಗಿ ಹೀಯಾಳಿಸುವ, ವ್ಯವಹಾರಿಕವಾಗಿ ತೊಂದರೆ ಕೊಡುವ ಮೂಲಕ ಭಯದ ವಾತಾವರಣ ಹುಟ್ಟಿಸುತ್ತಿರುವ ಕೆಲವು ಬ್ರಾಹ್ಮಣರಿಗೆ ಸರಿಯಾದ ರೀತಿಯಲ್ಲೇ ಉತ್ತರ ನೀಡುತ್ತೇವೆ ಎಂದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರ ನೀಡುವ ಸವಲತ್ತು ಸಿಗುವಂತೆ ಮಾಡುತ್ತೇವೆ. ಕೇವಲ ರಾಜಕೀಯ ವಿರೋಧಕ್ಕಾಗಿ ದ್ವೇಷಿಸುವ, ಬೆದರಿಸುವ, ಕಿರುಕುಳ ನೀಡುವ ಕೀಳು ಮನಸ್ಥಿತಿಯಿಂದ ಕೆಲವರು ಹೊರಬರಬೇಕು. ಅನಗತ್ಯ ಸಂಘರ್ಷಕ್ಕೆ ಇದು ಕಾರಣವಾದೀತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಆಯ್ಕೆ ವ್ಯಕ್ತಿಯ ಸ್ವಾತಂತ್ರ್ಯ. ಅದಕ್ಕೂ ಕಿರುಕುಳ ಎಂದರೆ ಅಪಾಯಕಾರಿ. ಇಷ್ಟು ದಿನ ಸಹಿಸಿಕೊಂಡಿzವೆ. ಇನ್ನು ಉತ್ತರಿಸುವ ದಾರಿ ಹುಡುಕುತ್ತೇವೆ. ಕೋಮುವಾದಿ ಬ್ರಾಹ್ಮಣರಿಂದ ಇಂತಹ ಕಿರುಕುಳ ಆದರೆ ನಮ್ಮ ಗಮನಕ್ಕೆ ತನ್ನಿ. ನಾವು ಒಟ್ಟಾಗಿ ಎದುರಿಸೋಣ ಎಂದು ಎಂ.ಜಿ. ಹೆಗಡೆ ಹೇಳಿದರಲ್ಲದೆ ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಮತ್ತು ಎಲ್ಲಾ ಜಾತಿ ಧರ್ಮದ ಜನರನ್ನು ಸಹಿಷ್ಣುತೆಯಿಂದ, ಪ್ರೀತಿಯಿಂದ ನೋಡುವ ಬ್ರಾಹ್ಮಣರನ್ನು ವ್ಯಾಪಕವಾಗಿ ಸಂಘಟಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಮುಂದಾಳು ಗುರುರಾಜ ಆಚಾರ್ಯ, ಬೆಟ್ಟ ರಾಜಾರಾಮ ಭಟ್ಟ, ಮಹೇಶ ಕುಮಾರ ಸುಳ್ಯ, ಸತ್ಯೇಂದ್ರ ವೇಣೂರು, ನಿವೃತ್ತ ಹಿರಿಯ ಬ್ಯಾಂಕ್ ಅಧಿಕಾರಿ ಟಿ.ಆರ್. ಭಟ್ಟ, ಡಾ. ಶಿವಾನಂದ ಮುಂಡಾಜೆ, ರಮೇಶ ಕೋಟೆ, ಕೆ. ರಾಘವೇಂದ್ರ, ವಿನಯ ಆಚಾರ್ಯ, ಬೆಟ್ಟ ಜಯರಾಮ ಭಟ್ಟ, ದಿನೇಶ್ ರಾವ್, ಬಾಲಕೃಷ್ಣ ಭಟ್ಟ, ಕೆಮ್ಮಟ್ಟು ಸ್ವರ್ಣ ಭಟ್ಥ, ವಕೀಲೆ ವಿದ್ಯಾ ಭಟ್, ನಮಿತಾ ರಾವ್, ಚೈತನ್ಯಾ ಭಟ್ಟ, ಪ್ರವೀಣ ಭಟ್ಟ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here