ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂಪನ್ನ

0

ಮರೋಡಿ: ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 9.30ರ ಸುಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕವು ವೈದಿಕ ವಿಧಿವಿಧಾನಗಳೊಂದಿಗೆ ವೈಭವದೊಂದಿಗೆ ಸಂಪನ್ನಗೊಂಡಿತು.

ಎ.12ರಂದು ಶುಕ್ರವಾರ ಬೆಳಿಗ್ಗೆ 6.30ರಿಂದ ಶ್ರೀ ಉಮಾಮಹೇಶ್ವರ ದೇವರಿಗೆ ಪಂಚಾಮೃತ ಅಭಿಷೇಕದೊಂದಿಗೆ ಕಲಶಾಭಿಷೇಕ ಆರಂಭಗೊಂಡಿತು. ಬಳಿಕ ನ್ಯಾಸ ಪೂಜೆ, ಮಹಾಪೂಜೆ, ಅವಭೃತ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ತಂತ್ರಿ ಬ್ರಹ್ಮಶೀ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ, ಮರೋಡಿ ಬೆಳ್ಳಿಬೀಡು ಪಾಶ್ವನಾಥ ಬಸದಿಯ ಆಡಳಿತ ಮೊಕ್ತೇಸರ ಹೇಮರಾಜ ಕೆ., ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶೋಧರ ಬಂಗೇರ, ಕೋಶಾಧಿಕಾರಿ ಅಣ್ಣಪ್ಪ ಹೆಗ್ಡೆ, ಮರೋಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಉದಯ ಹೆಗ್ಡೆ ನಾರಾವಿ, ಉದ್ಯಮಿ ದಯಾನಂದ ಪೂಜಾರಿ, ದೇವಸ್ಥಾನದ ಮೊಕ್ತೇಸರರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

ಸಂಜೆ 5ಗಂಟೆಯಿಂದ ಪರಿವಾರ ಸಹಿತ ಶ್ರೀ ಉಮಾಮಹೇಶ್ವರ ದೇವರಿಗೆ ಮಹಾರಂಗಪೂಜೆ, ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕುಣಿತಾ ಭಜನಾ ಮಂಡಳಿ, ಶ್ರೀ ಆದಿಶಕ್ತಿ ಭಜನಾ ತಂಡ ಪಲಾರಗೋಳಿ ಮತ್ತು ಬ್ರಹ್ಮಶ್ರೀ ಭಜನಾ ಮಂಡಳಿ ನಾವೂರು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ, ರಾಜೇಶ್ ಭಟ್ ನಿರ್ದೇಶನದಲ್ಲಿ ಟ್ಯಾಲೆಂಟ್‌ ಗ್ರೂಪ್ ಮೂಡುಬಿದಿರೆ ತಂಡದಿಂದ ನೃತ್ಯ ಸಂಗೀತ ಮತ್ತು ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here