ಬೆಳ್ತಂಗಡಿ: ಮೊಗೇರ ಸಮುದಾಯದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಮರುಸ್ಥಾಪಿಸಲು ಮತ್ತು ಪ್ರಮಾಣ ಪತ್ರ ವಿತರಿಸಲು ಇದ್ದ ತೊಡಕುಗಳನ್ನು ಅಧ್ಯಯನ ಮಾಡಿಲಾಗಿದೆ ಅನ್ನುವ ವರದಿಯನ್ನು ಸಮಿತಿಯ ಅಧ್ಯಕ್ಷ ಜೆ.ಸಿ ಪ್ರಕಾಶ್ರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸಲ್ಲಿಸಿದ್ದು, ಜೊತೆಗೆ ಮೀನುಗಾರ ಮೊಗೇರರು ಬಾಹ್ಯ ಪ್ರಭಾವ ಮತ್ತು ರಾಜಕೀಯ ಒತ್ತಡ ಹೇರಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆಯಲು ಹುನ್ನಾರ ನಡೆಸಿರುವ ಬಗ್ಗೆ ತಿಳಿದು ಬಂದಿದೆ.
ಜೆ.ಸಿ ಪ್ರಕಾಶ್ ರವರು ನೀಡಿದ ವರದಿಯನ್ನು ತಿರಸ್ಕರಿಸಬೇಕು ಹಾಗೂ ರಾಜ್ಯ ಸರಕಾರವು ಮೀನುಗಾರ ಮೊಗೇರರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡಲು ಮುಂದಾದಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಹೋರಾಟವನ್ನು ಚುನಾವಣೆ ಬಳಿಕ ನಡೆಸಲಿದೆ ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಹೇಳಿದರು.
ಅವರು ಎ.3ರಂದು ಗುರುವಾಯನಕೆರೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.1956 ರಿಂದ ಭಾರತ ಸರಕಾರವು ಸಂವಿಧಾನದ ವಿಚ್ಛೇದ 341 ರ ಪ್ರಕಾರ ಪ.ಜಾತಿಯ ಯಾದಿಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಅನುಕ್ರಮ ಸಂಖ್ಯೆ 78 ರಲ್ಲಿರುವ ಮೊಗೇರ್ (Moger) ಪ.ಜಾತಿ ಎಂದೂ ಉ.ಕನ್ನಡ ಜಿಲ್ಲೆಯ ಮೀನುಗಾರ ಪ್ರವೃತ್ತಿಯ ಮೊಗೇರರು ಹಿಂದುಳಿದ ಜಾತಿಯ ಪ್ರವರ್ಗ-1 ಎಂದೂ ತಿಳಿಸಲಾಗಿತ್ತು.
ಪರಿಶಿಷ್ಟ ಜಾತಿಯವರಲ್ಲದ ಮೀನುಗಾರ ಮೊಗೇರರು (ದ.ಕ. ಉಡುಪಿ ಮತ್ತು ಕೊಳ್ಳೆಗಾಲ ಹೊರತುಪಡಿಸಿ) ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದನ್ನು ಮನಗಂಡು ಕ್ಷೇತ್ರೀಯ ನಿರ್ಬಂಧವನ್ನು ಹಾಕಲಾಗಿತ್ತು.
ಆಡಳಿತಾವಧಿಯಲ್ಲಿ ಸೈಮನ್ ಕಮಿಷನ್ ನಡೆಸಿದ ಅಧ್ಯಯನದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಮೊಲ ಬೇಟೆಯಾಡುವ ಪ್ರವೃತ್ತಿಯ ಹಿನ್ನಲೆಯುಳ್ಳ ಪ.ಜಾತಿಯ ಮೊಗೇರರ ಹಿನ್ನಲೆಯ ಬಗ್ಗೆ ಉಲ್ಲೇಖವಿದೆ.ಈವರೆಗಿನ ಯಾವುದೇ ನ್ಯಾಯಾಂಗ ಪ್ರಾಧಿಕಾರವು ಕೂಡಾ ನೀಡಿದ ತೀರ್ಪಿನಲ್ಲಿ ಮೀನುಗಾರ ಮೊಗೇರರು ಪ.ಜಾತಿಯವರೆಂದು ಎಲ್ಲಿಯೂ ಹೇಳಲಿಲ್ಲ. 29.06.2011 ರಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯ ಪ್ರಾಧಿಕಾರವು ಕರ್ನಾಟಕ ರಾಜ್ಯದಲ್ಲಿನ ಪ.ಜಾತಿಯ ಯಡಿಯಲ್ಲಿ ಅನುಕ್ರಮ ಸಂಖ್ಯೆ 78ರಲ್ಲಿ ಮೊಗೇರ ಜಾತಿ ಇದ್ದು ಯಾವುದೇ ವ್ಯಕ್ತಿಯ ತಾನು ಪ.ಜಾತಿ ಮೊಗೇರ್ ಎಂದು ಪ್ರತಿಜ್ಞೆ ಗೈದು ಅರ್ಜಿ ಸಲ್ಲಿಸಿದಾಗ ಸಕ್ಷಮ ಪ್ರಾಧಿಕಾರವು ಆತನ ಈ ಮನವಿಯೊಂದಿಗೆ ಸಂಬಂಧಪಟ್ಟ ಶಾಲಾ ದಾಖಲಾತಿಗಳು, ವಾಸಸ್ಥಳ, ಕುಟುಂಬದ ವೃತ್ತಿ ಹಿನ್ನಲೆ, ಸ್ಥಳೀಯ ಚೌಕಾಸಿ ಹಾಗೂ ಇನ್ನಿತರ ಅವಶ್ಯಕ ವಿಚಾರಗಳ ಬಗ್ಗೆ ವಿಚಾರಣೆಗಳನ್ನು ನಡೆಸಿ ಅರ್ಜಿದಾರರು ಪರಿಶಿಷ್ಟರೆಂದು ರುಜುವಾತು ಪಡಿಸಲು ಸಾಕಷ್ಟು ಪೂರಕ ಕಾರಣಗಳಿದ್ದಾಗ ಮಾತ್ರ ಅವರು ಅಥವಾ ಅವಳು ಪ.ಜಾತಿಯವರೆಂದು ಪ್ರಮಾಣ ಪತ್ರಕ್ಕೆ ಅರ್ಹರಾಗುತ್ತಾರೆ.
ಪ.ಜಾತಿಯ ಪಟ್ಟಿಯಲ್ಲಿರುವ ಮೊಲ ಬೇಟೆಯಾಡುವ ಪ್ರವೃತ್ತಿ ಹಿನ್ನಲೆಯುಳ್ಳ ನೈಜ ಮುಗೇರರಿಗೆ ಯಾವುದೇ ಅಡೆತಡೆ ಇಲ್ಲದೆ ಮೀಸಲಾತಿ ಸೌಲಭ್ಯವು ದೊರಕುತ್ತಿದೆ. ಆದರೆ ಜೆ.ಸಿ ಪ್ರಕಾಶ್ ರವರು ತಿಳಿಸಿದಂತೆ ಯಾವ ಮೊಗೇರರ ಮೀಸಲಾತಿ ಸೌಲಭ್ಯವು ಮರುಸ್ಥಾಪಿಸಬೇಕು ಮತ್ತು ಯಾರಿಗೆ ಪ.ಜಾತಿ ಪ್ರಮಾಣ ಪತ್ರ ವಿತರಿಸಲು ತೊಡಕಾಗಿದೆ ಎಂದು ಸ್ಪಷ್ಟಪಡಿಸಬೇಕು. ಈ ರೀತಿಯ ಗೊಂದಲಕಾರಿ ಹೇಳಿಕೆಗಳನ್ನು ನೀಡುವುದರ ಹಿಂದೆ ಮೀನುಗಾರ ಮೊಗೇರರ ಪ್ರಭಾವ ಅಡಗಿರುವುದು ಗೋಚರವಾಗಿರುತ್ತದೆ.
ಜೆ.ಸಿ ಪ್ರಕಾಶ್ ಹಿರಿಯ ಶ್ರೇಣಿಯ IAS ಅಧಿಕಾರಿಗಳು ಹಾಗೂ ಇನ್ನಿತರ ನಾಲ್ಕು ಅಧಿಕಾರಿಗಳನ್ನೊಳಗೊಂಡ ಮೊಗೇರ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ಸಮಿತಿಯ ಅಂತಿಮ ವರದಿಯನ್ನು ಕರ್ನಾಟಕ ರಾಜ್ಯ ಸರಕಾರವು ಯಾವ ಕಾರಣಕ್ಕೂ ಸ್ವೀಕರಿಸಬಾರದು. ಹಾಗೂ 18.06.2022ರಂದು ನೈಜ ಪರಿಶಿಷ್ಟ ಜಾತಿಯ ಮೊಗೇರ ಸಮುದಾಯವೆಂದು ಕರೆಯಲ್ಪಡುವ ನೀವು ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ ಮಹಾದೇವಪ್ಪ ಇವರಿಗೆ ಮನವಿಯನ್ನೂ ಸಲ್ಲಿಸಿರುತ್ತೇವೆ. ಇದಕ್ಕೂ ಮಿಗಿಲಾಗಿ ಅಧ್ಯಯನ ವರದಿಯನ್ನು ನೈಜ ಪರಿಶಿಷ್ಟ ಜಾತಿಯ ಮೊಗೇರರಾದ (ಮೊಲ ಬೇಟೆಯಾಡುವ ಪ್ರವೃತ್ತಿಯ ಹಿನ್ನಲೆಯುಳ್ಳವರು) ನಮ್ಮ ಸಂವಿಧಾನಿಕ ಮೀಸಲಾತಿ ಸವಲತ್ತುಗಳಿಗೆ ಚ್ಯುತಿ ಬಂದಲ್ಲಿ ಅಥವಾ ವರದಿಯು ನಮಗೆ ವಿರುದ್ಧವಾಗಿದ್ದಲ್ಲಿ ರಾಜ್ಯಾದ್ಯಾಂತ ಹೋರಾಟ ಮಾಡಲು ಸರಕಾರ ನಮಗೆ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಂದರ ಮೇರ, ಜಿಲ್ಲಾ ಮೊಗೇರ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ಬೆಳ್ತಂಗಡಿ ಮೊಗೇರ ಚಿಂತನ ವೇದಿಕೆ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಸುಂದರ ಇಂದಬೆಟ್ಟು, ಜಗದೀಶ್, ಸುಂದರ ಅಳದಂಗಡಿ, ಮೊಗೇರ ಹಿತ ಚಿಂತನ ವೇದಿಕೆಯ ಸಂಚಾಲಕ ಮೋಹನ್ ಮಾಚಾರು, ದಲಿತ ಮುಖಂಡ ಜಯಾನಂದ ಕೊಯ್ಯೂರು ಉಪಸ್ಥಿತರಿದ್ದರು.