ಬದನಾಜೆ ಸರಕಾರಿ ಶಾಲೆಯಲ್ಲಿ ಸುಜ್ಞಾನ ನಿಧಿ ಯೋಜನೆಗೆ ಚಾಲನೆ- ಜ್ಞಾನ ಕರುಣಿಸಿದ ಶಾಲೆಯ ಅಭಿವೃದ್ಧಿಗೆ ನೆರವಿನ ಹಸ್ತ ನೀಡಿ: ಶರತ್ ಕೃಷ್ಣ ಪಡ್ವೆಟ್ನಾಯ

0

ಉಜಿರೆ: ಸುಜ್ಞಾನ ಎಂಬ ಹೆಸರಿನಲ್ಲೇ ವಿಶೇಷ ಶಕ್ತಿ ಇದೆ. ಜ್ಞಾನ ಯಾರೂ ಕದಿಯಲಾಗದ, ಖರೀದಿಸಲಾಗದ ಸೊತ್ತು. ಇಲ್ಲಿ ಈಗ ಜ್ಞಾನಾರ್ಜನೆ ಮಾಡುತ್ತಿರುವ ಮಕ್ಕಳು ಮುಂದೆ ಕಲಿತು ಹೋದ ಮೇಲೆ, ಕಲಿತ ಶಾಲೆಯನ್ನು ಮರೆಯದೇ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರು ಸಲಹೆ ನೀಡಿದರು.

ಉಜಿರೆ ಗ್ರಾಮದ ಮಾಚಾರು ಬದನಾಜೆ ಸ.ಉ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಸುಜ್ಞಾನ ನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಬದನಾಜೆ ಶಾಲೆಯ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ ಈ ನಿಟ್ಟಿನಲ್ಲಿ ಮಾದರಿಯಾಗಿದೆ. ಬದನಾಜೆ ಸರಕಾರಿ ಶಾಲೆ ಅಭಿವೃದ್ಧಿ ವೇಗ ಹಿರಿಯ ವಿದ್ಯಾರ್ಥಿಗಳ, ವಿದ್ಯಾಭಿಮಾನಿಗಳ ಸಹಕಾರದಿಂದ ಇನ್ನಷ್ಟು ಪ್ರಗತಿಪಥದಲ್ಲಿ ಸಾಗಬೇಕು.ಸುಜ್ಞಾನ ನಿಧಿ ಶಾಲೆಯ ಪಾಲಿಗೆ ಅಕ್ಷಯನಿಧಿಯಾಗಲಿ ಎಂದು ಹರಸಿದರು.

ಸುಜ್ಞಾನ ನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಉದ್ಯಮಿ ಮೋಹನ್ ಕುಮಾರ್ ಮಾತನಾಡಿ, ಇತ್ತೀಚಿಗೆ ನನ್ನನ್ನು ಭೇಟಿ ಮಾಡುತ್ತಿರುವವರಲ್ಲಿ ಸರಕಾರಿ ಶಾಲೆಗಳ ಶಿಕ್ಷಕರ, ಎಸ್.ಡಿ.ಎಂ.ಸಿ ಯವರ ಸಂಖ್ಯೆ ಅಧಿಕವಾಗಿದೆ.ಇದುವರೆಗೆ ಬದುಕು ಕಟ್ಟೋಣ ತಂಡದ ಮೂಲಕ ನಾಲ್ಕು ಸರಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ.ಆದರೆ ಬದನಾಜೆಯ ಹಿರಿಯ ವಿದ್ಯಾರ್ಥಿ ಸಂಘದ ಈ ಪರಿಕಲ್ಪನೆ ಮಾದರಿ ಹಾಗೂ ಅಭಿನಂದನೀಯ.ಶಾಲೆಯ ಅಭಿವೃದ್ಧಿಗೆ ಸುಜ್ಞಾನ ನಿಧಿ ಪ್ರಾರಂಭಿಸಿರುವ ಚಿಂತನೆ ರಾಜ್ಯಕ್ಕೆ ಮಾದರಿ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಕೈಲಾದ ನೆರವು ನೀಡುವುದಾಗಿ ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಮಾತನಾಡಿ, ಮನುಷ್ಯನ ಸಂಪಾದನೆಯನ್ನು ಮೂರೇ ಜನ ಅನುಭವಿಸಬೇಕು. ಒಂದು ಕುಟುಂಬ, ಎರಡನೆಯದು ದಾನದ ಮೂಲಕ ದುರ್ಬಲ ವ್ಯಕ್ತಿಗಳ ಸಬಲೀಕರಣಅಥವಾ ಯಾರೋ ತಿಂದು ಮುಗಿಸುವುದು. ಆದ್ದರಿಂದ ಸಂಪದಾನೆಯ ಒಂದಂಶ ಸಮಾಜಮುಖಿಯಾಗಿರಲಿ, ಅದರಲ್ಲೂ ಶಾಲೆಗಳಿಗೆ ಕೊಡುವ ಕೆಲಸ ಆಗಬೇಕು. ರೋಟರಿ ಕ್ಲಬ್‌ನ ಸಹಕಾರ ಶಾಲೆಗೆ ಸದಾ ಇರಲಿದೆ ಎಂದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಮಾತನಾಡಿ, ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ಅನೇಕ ಮಂದಿ ರಾಷ್ಟ್ರಮಟ್ಟದಲ್ಲಿ ಮಿಂಚಿದವರಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಉತ್ತೇಜನ ಬೇಕಾಗಿದೆ. ಈ ಮಧ್ಯೆ ಸುಜ್ಞಾನ ನಿಧಿಯಂತ ಯೋಜನೆ ತಾಲೂಕಿನಾದ್ಯಂತ ಸರಕಾರಿ ಶಾಲೆಗಳ ಬೆಳವಣಿಗೆಗೆ ದಾರಿದೀಪವಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿದ್ದ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಲಕ್ಷ್ಮಣ ಪೂಜಾರಿ, ಎಸ್.ಕೆ.ಡಿ.ಆರ್.ಡಿ.ಪಿ.ಯ ನಿವೃತ್ತ ಪ್ರಾದೇಶಿಕ ನಿರ್ದೇಶಕರಾದ ಸೀತಾರಾಮ ಶೆಟ್ಟಿ ಕೆಂಬರ್ಜೆ, ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಅರವಿಂದ ಕಾರಂತ, ರೋಟರಿ ಕ್ಲಬ್ ಕೋಶಾಧಿಕಾರಿ ಅಬೂಬಕ್ಕರ್ ಯು.ಎಚ್, ಸಂದರ್ಭೋಚಿತವಾಗಿ ಮಾತನಾಡಿದರು.

ಪ್ರಗತಿ ಯುವತಿ ಮಂಡಲ ಅಧ್ಯಕ್ಷೆ ಅರುಣಾಕ್ಷಿ, ಲಕ್ಷ್ಮೀನಾರಾಯಣ ಭಜನಾ ಮಂಡಳಿ ಬದನಾಜೆಯ ಅಧ್ಯಕ್ಷ ಸನತ್ ಕುಮಾರ್ ಪಾಲೆಂಜ, ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ನಿವೃತ್ತ ಶಿಕ್ಷಕರಾದ ಬಾಬುಗೌಡ ಬಾಜಿಮಾರು, ಸುಜ್ಞಾನ ನಿಧಿಯ ಗೌರವ ಸಂಚಾಲಕ ಗಿರಿರಾಜ ಬಾರಿತ್ತಾಯ, ಸಂಚಾಲಕರಾದ ಸಂದರ ಬಂಗೇರ, ಸಹ ಸಂಚಾಲಕರಾದ ಸೋಮಶೇಖರ್ ಕೆ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಲಲಿತಾ ಉಪಸ್ಥಿತರಿದ್ದರು.

ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ ಸಂಘ ಅಧ್ಯಕ್ಷ ರಾಮಯ್ಯ ಗೌಡ ಪ್ರಸ್ತಾವಿಸಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸುರೇಶ್ ಮಾಚಾರ್ ನಿರೂಪಿಸಿದರು. ಬದನಾಜೆ ಸ.ಪ್ರೌಢಶಾಲೆ ಶಿಕ್ಷಕಿ ಮೇಧಾ ಕೆ.ವಂದಿಸಿದರು‌.

LEAVE A REPLY

Please enter your comment!
Please enter your name here