ತುಮಕೂರು ಮೂವರ ಹತ್ಯೆ ಪ್ರಕರಣ: ಕೃತ್ಯ ನಡೆಸಿದ ದರೋಡೆಕೋರರ ಮೇಲೆ ಕಠಿಣ ಕ್ರಮಕ್ಕೆ ಎಸ್.ಡಿ.ಪಿ.ಐ ಆಗ್ರಹ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ‘ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿದ್ದು, ಸರ್ಕಾರ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ದರೋಡೆಕೋರರ ಮೇಲೆ ಕಠಿಣ ಶಿಕ್ಷೆ ನೀಡಬೇಕು. ಟಾಡಾ ಕಾಯ್ದೆಯಂತಹ ಕಠಿಣ ಕಾನೂನನ್ನು ಈ ದರೋಡೆಕೋರರ ಮೇಲೆ ಜಾರಿಗೆ ತರಬೇಕು’ ಎಂದು ಎಸ್.ಡಿ.ಪಿ.ಐ ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ನವಾಜ್ ಶರೀಪ್ ಕಟ್ಟೆ ಹೇಳಿದರು.

ಅವರು ಮಾ.26ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಿಧಿಯ ಆಸೆ ತೋರಿಸಿ ಕೇವಲ 6 ಲಕ್ಷ ರೂಪಾಯಿಗೆ ನಡೆದ ಕೊಲೆ ಇದೆಂದು ತುಮುಕೂರು ಜಿಲ್ಲಾ ಪೊಲೀಸರು ಪತ್ರಿಕಾ ಹೇಳಿಕೆ ನೀಡಿದ್ದು, ಆದರೆ ಹತ್ಯೆಗೊಳಗಾದವರ ಮನೆಯವರ ಹೇಳಿಕೆ ನೋಡುವಾಗ ಹಂತ ಹಂತವಾಗಿ 60 ಲಕ್ಷದಿಂದ 1 ಕೋಟಿಯವರೆಗೆ ಅವರು ದೋಚಿದ್ದು ಗಮನಕ್ಕೆ ಬರುತ್ತದೆ. ಹತ್ಯೆಗೊಳಗಾದ ಮದ್ದಡ್ಕದ ಇಸಾಕ್ ಮನೆ ಮಾರಿದ ಹಣ, ಇರುವ ಮನೆಗೆ ಮಾಡಿದ ಸಾಲ ಹಾಗೂ ಹೆಂಡತಿ ಮಕ್ಕಳ ಚಿನ್ನಾಭರಣದ ಹಣವನ್ನು ಸೇರಿಸಿ ಒಟ್ಟು 35 ರಿಂದ 50 ಲಕ್ಷದವರೆಗೆ, ಶಿರ್ಲಾಲಿನ ಸಿದ್ದೀಕ್ ತಂದೆ ನೀಡಿದ 5 ಲಕ್ಷ ಜತೆಗೆ ಹೆಂಡತಿ ಮತ್ತು ತಂಗಿಯ ಬಂಗಾರವನ್ನು ಅಡವಿಟ್ಟು ಸುಮಾರು 15 ಲಕ್ಷದಷ್ಟು ಹಣ ಕೊಂಡೊಯ್ದಿದ್ದಾರೆ. ಆದರೆ ತುಮುಕೂರು ಪೊಲೀಸರು ಕೇವಲ 6 ಲಕ್ಷಕ್ಕಾಗಿ ಕೊಲೆ ನಡೆದಿದೆ ಎಂಬ ಹೇಳಿಕೆ ನೀಡಿದ್ದು, ಇದರಿಂದ ಪೊಲೀಸರು ಮತ್ತು ದರೋಡೆಕೋರರ ಮಧ್ಯೆ ಒಳ ಒಪ್ಪಂದವಾದ ಹಾಗೆ ಅನುಮಾನ ಇದೆ. ಪೊಲೀಸರು ಆರೋಪಿಗಳ ಜತೆ ಶಾಮೀಲಾಗಿ ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬೆಳ್ತಂಗಡಿ ತಾಲ್ಲೂಕಿನಲ್ಲಿ ಹಲವರಿಗೆ ಈ ರೀತಿ ನಿಧಿ, ಇನ್ನಿತರ ಆಸೆ ತೋರಿಸಿ ವಂಚಿಸುವ ಹಲವು ರೀತಿಯಲ್ಲಿ ಕರೆಗಳು ಬರುತ್ತಿದ್ದು, ತಾಲ್ಲೂಕಿನಲ್ಲಿ ಇದರ ದಲ್ಲಾಲಿಗಳು ವ್ಯವಸ್ಥಿತವಾಗಿ ಇದ್ದುಕೊಂಡು ಈ ದಂಧೆಯನ್ನು ಮಾಡುತ್ತಿದ್ದಾರೆ. ಪೊಲೀಸರು ಅಂತಹ ದಂಧೆ ಮಾಡುತ್ತಿರುವ ದಲ್ಲಾಲಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.ಇಲ್ಲದೇ ಹೋದರೆ ಇನ್ನಷ್ಟು ಅಮಾಯಕರು ಈ ರೀತಿಯ ಆಮಿಷಕ್ಕೆ ಬಲಿಯಾಗಬಹುದು’ ಎಂದರು.

‘ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕೃತ್ಯವನ್ನು ಖಂಡಿಸಿ ಕುಟುಂಬಕ್ಕೆ ನ್ಯಾಯ ದೊರಕಿಸುವಲ್ಲಿ ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ ಅವರು, ಹತ್ಯೆಗೊಳಗಾದವರು ತಾಲ್ಲೂಕಿನವರೇ ಆದರೂ ಜನಪ್ರತಿನಿಧಿಗಳಾದ ಶಾಸಕ ಹರೀಶ್ ಪೂಂಜ ಆಗಲಿ, ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್ ಹಾಗೂ ಪ್ರತಾಪಸಿಂಹ ನಾಯಕ್ ಆಗಲಿ ಅವರ ಕುಟುಂಬದ ಬಳಿ ಹೋಗಿ ಸಾಂತ್ವಾನ ನೀಡುವ ಕೆಲಸವನ್ನು ಮಾಡಿಲ್ಲ. ಕನಿಷ್ಠ ಕೃತ್ಯವನ್ನು ಖಂಡಿಸುವ ಹೇಳಿಕೆಯನ್ನೂ ನೀಡಿಲ್ಲ. ಜನಪ್ರತಿನಿಧಿಗಳು ಇಂತಹ ವಿಚಾರದಲ್ಲಿ ಜಾತಿ – ಧರ್ಮ ನೋಡಿದರೆ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಸಾಧಿಕ್ ಲಾಯಿಲ, ಕೋಶಾಧಿಕಾರಿ ಅಶ್ರಫ್ ಕಟ್ಟೆ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here