ಉಜಿರೆ ರೈತ ಉತ್ಪಾದಕರ ಕಂಪನಿ ಉದ್ಘಾಟನೆ, ಶೇರು ಪತ್ರ ವಿತರಣೆ- ರೈತರು ಆರ್ಥಿಕವಾಗಿ ಸಬಲರಾಗಬೇಕು: ಶರತ್ ಕೃಷ್ಣ

0

ಉಜಿರೆ : ಉಜಿರೆ ರೈತ ಉತ್ಪಾದಕರ ಕಂಪನಿ ಓಡಲ ಇದರ ಉದ್ಘಾಟನೆ ಹಾಗೂ ಶೇರು ಪತ್ರ ವಿತರಣೆ ಸಮಾರಂಭ ಮಾ.25ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟನ್ನಾಯ ಉದ್ಘಾಟಿಸಿ ಮಾತನಾಡಿ ಕೇಂದ್ರ ಸರಕಾರದ ಅನುದಾನದಿಂದ ನಡೆಸಲ್ಪಡುವ ಈ ರೈತ ಉತ್ಪಾದಕರ ಕಂಪನಿಯ ಸಂಪೂರ್ಣ ಸೌಲಭ್ಯವನ್ನು ರೈತರು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.

ಉಜಿರೆ ರೈತ ಉತ್ಪಾದಕರ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿನೇಶ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಭಾರತ ಸರಕಾರದ ಅಂಗ ಸಂಸ್ಥೆಯಾದ SFAC ಯಿಂದ ಅನುಮೋದನೆಗೊಂಡ ಉಜಿರೆ ರೈತ ಉತ್ಪಾದಕರ ಕಂಪನಿಯು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧೀನಕ್ಕೆ ಒಳಪಟ್ಟು ರೈತರಿಗೆ ನೇರ ಮಾರುಕಟ್ಟೆ ಒದಗಿಸಿಕೊಡುವ ಯೋಜನೆಯಾಗಿದೆ. ರೈತರಿಂದ ರೈತರಿಗೋಸ್ಕರ ಇರುವ ಕಂಪನಿ ಇದಾಗಿದೆ ಎಂದರು.

ಉಜಿರೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಜಿ. ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಇಕೋವ ಸಂಸ್ಥೆಯ ಯೋಜನಾ ಸಂಯೋಜಕ ತಿಪ್ಪೇ ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಂಪನಿಯ ಸಮಗ್ರ ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿ ಬೆಂಗಳೂರು ಇಕೋವ ಸಂಸ್ಥೆಯ ಯೋಜನಾ ಸಂಯೋಜಕ ಡಿಕೇಸ್, ಸಹಾಯಕ ಯೋಜನಾ ಸಂಯೋಜಕ ಧರ್ಮೇಂದ್ರ, ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ನೋಂದಾಯಿತ ರೈತರಿಗೆ ತರಕಾರಿ ಬೀಜ, ಸೋಲಾರ್ ಟಾರ್ಪಲ್, ಕಪ್ಪು ಟಾರ್ಪಲ್, ಶೇಡ್ ನೆಟ್ ಕಡಿಮೆ ದರದಲ್ಲಿ ವಿತರಿಸಲಾಯಿತು. ರೈತ ಉತ್ಪಾದಕರ ಕಂಪನಿ ನಿರ್ದೇಶಕ ಚಂದ್ರಶೇಖರ್ ನಿಡ್ಲೆ ನಿರೂಪಿಸಿ ಇನ್ನೊರ್ವ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜ್ ವಂದಿಸಿದರು.

LEAVE A REPLY

Please enter your comment!
Please enter your name here