ಎಸ್.ಡಿ.ಎಂ ಪ್ರಾಧ್ಯಾಪಕರಿಗೆ ಅಮೆರಿಕನ್ ಪೇಟೆಂಟ್- ರಸಾಯನ ಶಾಸ್ತ್ರ ಸಂಶೋಧನೆಗೆ ವಿಶ್ವ ಮನ್ನಣೆ- ಡಾ.ನೆಫಿಸತ್, ಡಾ.ಶಶಿಪ್ರಭಾ ಸಾಧನೆ

0

ಉಜಿರೆ: ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ಪಿ. ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಪ್ರಭಾ ಅವರ ಸಂಶೋಧನೆಗೆ ಪ್ರತಿಷ್ಠಿತ ಅಮೆರಿಕನ್ ಪೇಟೆಂಟ್ ಲಭಿಸಿದೆ.

ಪ್ರಪ್ರಥಮ ಬಾರಿಗೆ ಎಸ್.ಡಿ.ಎಂ ಕಾಲೇಜು ಅಮೆರಿಕದ ಪೇಟೆಂಟ್ ಪಡೆದ ಹೆಗ್ಗಳಿಕೆಗೆ ಭಾಜನವಾಗಿದೆ.ಈ ಹಿಂದೆ ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾರಾಯಣ ಹೆಬ್ಬಾರ್ ಅವರ ಸಂಶೋಧನೆಗೆ ಆಸ್ಟ್ರೇಲಿಯಾದ ಪೇಟೆಂಟ್ ಲಭಿಸಿತ್ತು.ಇದೀಗ ಈ ವಿಭಾಗದ ಇನ್ನಿಬ್ಬರು ಪ್ರಾಧ್ಯಾಪಕರಿಗೆ ಅಮೆರಿಕನ್ ಪೇಟೆಂಟ್ ಸಿಕ್ಕಿದೆ.ಉಳಿದೆಲ್ಲ ದೇಶಗಳ ಪೇಟೆಂಟ್‌ಗಿಂತ ಅಮೆರಿಕನ್ ಪೇಟೆಂಟ್‌ಗೆ ವಿಶೇಷ ವಿಶ್ವಮಾನ್ಯತೆ ಇದೆ.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರದ ಸಂಶೋಧನಾ ಪ್ರಯೋಗಾಲಯದಲ್ಲಿಯೇ ಈ ಇಬ್ಬರು ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.’ಬೆಂಝಲಿಡೀನ್ ಡಿರೈವೆಟೀಸ್ ಆಫ್ ಫಿನೊಬಾಮ್ ಆ್ಯಸ್ ಆ್ಯಂಟಿ-ಇನ್‌ಪ್ಲಮೇಟರಿ ಏಜೆಂಟ್’ ಎಂಬ ವಿಷಯದ ಮೇಲೆ ಈ ಸಂಶೋಧನೆ ಕೈಗೊಳ್ಳಲಾಗಿತ್ತು.

ದೈಹಿಕ ನೋವು ನಿವಾರಕ ಔಷಧಿಯ ಪ್ರಯೋಜನಗಳನ್ನು ವಿಸ್ತರಿಸುವುದಕ್ಕೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ಮಹತ್ವವಿದೆ. ವೈದ್ಯಕೀಯ ರಂಗದ ಚಿಕಿತ್ಸೆಯ ವಿಧಾನಗಳನ್ನು ಮರುರೂಪಿಸುವುದಕ್ಕೆ ಪ್ರಸಕ್ತ ಸಂಶೋಧನೆಯ ಫಲಿತಗಳು ಪ್ರಯೋಜನಕಾರಿಯಾಗಲಿವೆ.

ಸೌದಿ ಅರೇಬಿಯಾದ ‘ಕಿಂಗ್ ಫೈಸಲ್’ ವಿಶ್ವವಿದ್ಯಾಲಯದ ಸಹಭಾಗಿತ್ವದೊಂದಿಗೆ ಕೈಗೊಳ್ಳಲಾಗಿದ್ದ ಈ ಸಂಶೋಧನೆಗೆ ಲಭಿಸಿದ ಆಮೆರಿಕನ್ ಪೇಟೆಂಟ್‌ಗೆ 20 ವರ್ಷಗಳ ಸುದೀರ್ಘ ಅವಧಿಯ ರಕ್ಷಣೆ ಇದೆ. ಈ ನಿರ್ದಿಷ್ಟ ಸಂಶೋಧನಾ ಫಲಿತಗಳ ಆಧಾರದ ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯವು ಕಾಲೇಜಿನ ಈ ಇಬ್ಬರು ಪ್ರಾಧ್ಯಾಪಕರದ್ದಾಗಿದೆ. ಈ ಫಲಿತಗಳನ್ನು ಬಳಸಿ ಉತ್ಪನ್ನ ತಯಾರಿಕೆ, ಬಳಕೆ ಮತ್ತು ಮಾರಾಟದಿಂದ ಇತರರನ್ನು ಅಮೆರಿಕನ್ ಪೇಟೆಂಟ್ ನಿರ್ಬಂಧಿಸುತ್ತದೆ.

ಅಭಿನಂದನೆ: ಡಾ.ನೆಫಿಸತ್ ಮತ್ತು ಡಾ.ಶಶಿಪ್ರಭಾ ವಿಭಾಗದ ಪ್ರಯೋಗಾಲಯದಲ್ಲಿಯೇ ಸಂಶೋಧನೆ ಕೈಗೊಂಡು ಅಮೆರಿಕನ್ ಪೇಟೆಂಟ್‌ನ ವಿಶ್ವಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯ.

ಪ್ರತಿಷ್ಠಿತ ಅಮೆರಿಕನ್ ಪೇಟೆಂಟ್ ಮನ್ನಣೆಯಿಂದ ಭವಿಷ್ಯದ ವಿನೂತನ ಸಂಶೋಧನಾ ಹೆಜ್ಜೆಗಳಿಗೆ ಹೊಸದೊಂದು ಮಾದರಿ ಸೃಷ್ಟಿಯಾದಂತಾಗಿದೆ ಎಂದು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಧ್ಯಾಪಕರ ಸಾಧನೆಯನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್., ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾ‌ರ್ ಹೆಗ್ಡೆ ಪ್ರಶಂಸಿದ್ದಾರೆ.

p>

LEAVE A REPLY

Please enter your comment!
Please enter your name here