ಮಾ.21-24: ಶಿಶಿಲ ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಶಿಶಿಲ: ಶಿಶಿಲ ಗ್ರಾಮದಲ್ಲಿರುವ ಗಡಿಚಾಮುಂಡಿಯು ಬಹಳ ಕಾರ್ಣಿಕದ ಮಾತೆಯಾಗಿದ್ದಾಳೆ.ಶ್ರೀ ಮಾತೆಯು ಕಪಿಲಾ ನದಿ ತಟದಲ್ಲಿ ರಮ್ಯ ಮನೋಹರವಾದ ಪ್ರಕೃತಿಯ ತಪ್ಪಲಲ್ಲಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿ ನೆಲೆಸಿದ್ದು, ಶ್ರೀ ಗಡಿಚಾಮುಂಡಿಯೆಂದು ಪ್ರಸಿದ್ದಿ ಹೊಂದಿರುವ ಕ್ಷೇತ್ರವಾಗಿದೆ.

ಶ್ರೀ ಕ್ಷೇತ್ರ ಸಾನಿಧ್ಯವು ಬಹಳ ಪುರಾತನವಾಗಿದ್ದು, (ಪ್ರಾಚೀನವಾಗಿದ್ದು) ಹಿಂದಿನ ಕಾಲದಲ್ಲಿ ರಾಜರಿಂದ ಪೂಜೆಗೊಂಡಿದ್ದಳು. ಹಾಗೆಯೇ ಹಿಂದಿನ ಕಾಲದಲ್ಲಿ ಜನರ ಕ್ಷೇಮಕ್ಕೆಂದು ರಾಜರು ವನ್ಯಮೃಗಗಳಿಂದ ನಾಡಿನ ಜನರಿಗೆ ತೊಂದರೆ ಬಂದಾಗ ಇಲ್ಲಿಯ ಚಾಮುಂಡಿಗೆ ಪೂಜೆಯಿತ್ತು ಕಾಡಿಗೆ ತೆರಳಿ ಭೇಟೆಯಾಡಿ ಭೇಟೆಯನ್ನು ತಾಯಿಯ ಬಂಟನಾದ ಗುಳಿಗನಿಗೆ ನೈವೇದ್ಯವೆಂದು ಅರ್ಪಿಸಿ ವನಭೋಜನ ಸ್ವೀಕರಿಸುತ್ತಿದ್ದ ವಿಶೇಷ ಸ್ಥಳವಾಗಿದೆ.

ಚಾಮುಂಡಿಯು ಮುಂದೆ ಇಲ್ಲಿನ ಜನರಿಗೆ ಕಾಡುತ್ಪತ್ತಿಗೆಂದು ಬಂದಾಗ ಅದೃಶ್ಯ ರೂಪದಿಂದ ದೃಶ್ಯ ರೂಪಕ್ಕೆ ಊರ ಜನರ ನಂಬಿಕೆಯ ರೂಪದಲ್ಲಿ ಪ್ರಕಟವಾಗುತ್ತಿದ್ದಳು.ಭೈರಾಪುರದ ಭಕ್ತರು ಇಲ್ಲಿಯ ದೇವಿಗೂ ಹಾಗೆಯೇ ಇಲ್ಲಿನ ಭಕ್ತರು ಭೈರವೇಶ್ವರನಿಗೂ ಸೇವೆ ಸಲ್ಲಿಸುವ ಪದ್ಧತಿ ಬಹಳ ವಿಶಿಷ್ಟವಾದದ್ದಾಗಿತ್ತು.ಯಾಕೆಂದರೆ, ಇದು ಚಾರಣಯಾತ್ರೆಯಾಗಿತ್ತು.ಶಬರಿಮಲೆ ಯಾತ್ರೆಯಂತೆಯೇ ಇಲ್ಲಿಯೂ ಭಕ್ತರು ಯಾತ್ರೆ ಕೈಗೊಳ್ಳುತ್ತಿದ್ದರು.ಪ್ರಸ್ತುತ ಇಲ್ಲಿನ ಗ್ರಾಮಸ್ಥರ ಸಹಕಾರದಿಂದ 13 ವರ್ಷಗಳ ಹಿಂದೆಯೇ ಶ್ರೀ ಕ್ಷೇತ್ರವು ಪ್ರಶ್ನಾ ಜೀರ್ಣೋದ್ಧಾರಗೊಂಡು ವರ್ಷಂಪ್ರತಿ ಮೀನ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ದೇವಿಗೆ ಗಣಹೋಮ, ಚಂಡಿಕಾಹೋಮ ಸಹಿತ ನವಕ ಕಲಶಾಭಿಷೇಕವು ನಡೆದುಕೊಂಡು ಬಂದಿದೆ.ಅದೇ ರೀತಿ ದೀಪಾವಳಿಗೆ ಶ್ರೀದೇವಿಗೆ ಮತ್ತು ಸಪರಿವಾರ ದೈವಗಳಿಗೆ ತಂಬಿಲ ಹಾಗೂ ವಿಶೇಷ ದಿನಗಳಲ್ಲಿ ಊರಿನ ಭಕ್ತಾಭಿಮಾನಿಗಳಿಗೆ ಅನ್ನದಾನ ನಡೆದುಕೊಂಡು ಬಂದಿರುತ್ತದೆ.

ಶ್ರೀ ಕ್ಷೇತ್ರದ ತಂತ್ರಿವರ್ಯರಾಗಿ ಶ್ರೀಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನ, ಮುದ್ಯದ ವೇದಮೂರ್ತಿ ಶ್ರೀ ಅನಂತಕೃಷ್ಣ ಉಡುಪರು ಸೇವೆಯನ್ನು ನಡೆಸಿಕೊಂಡು ಬಂದಿರುತ್ತಿದ್ದು, ಸದ್ರಿಯವರ ಕಾಲಾನಂತರ ಇದೀಗ ಪುನಃ ಶ್ರೀ ಸ್ಥಳದಲ್ಲಿ ಒಂದು ದಿನದ ತಾಂಬೂಲ ಪ್ರಶ್ನಾ ಚಿಂತನವನ್ನು ಸಿ.ವಿ.ಪೊದುವಾಳ್ ಪಯ್ಯನ್ನೂರು ಇವರ ನೇತೃತ್ವದಲ್ಲಿ ದಲ್ಲಿ ನಡೆಸಿ, ಅದರಲ್ಲಿ ಕಂಡು ಬಂದಂತಹ ಪರಿಹಾರ ಕ್ರಮವನ್ನು ಋತ್ವಿಜರ ಮೂಲಕ ನಡೆಸುವುದೆಂದು ತದನಂತರ ಶ್ರೀ ತಾಯಿಗೆ ಬ್ರಹ್ಮಕಲಶವನ್ನು ನಡೆಸುವುದೆಂದು ಊರಿನ ಭಕ್ತಾಭಿಮಾನಿಗಳ ಸಮಕ್ಷಮದಲ್ಲಿ ದೇವಸ್ಥಾನದ ಸಮಿತಿಯ ಮೂಲಕ ನಿರ್ಣಯ ತೆಗೆದುಕೊಳ್ಳಲಾಯಿತು.

ದೇವಿಯ ಮಹಾತ್ಮೆಯನ್ನು ನೋಡಿದಾಗ ಚಿಂತಕರ ಚಿಂತನೆಯಂತೆ ಶ್ರೀ ಗಡಿಚಾಮುಂಡಿಯು ಶಿರಾಡಿ ಘಾಟಿಯಿಂದ ಹಿಡಿದು ಚಾರ್ಮಾಡಿ ಘಾಟಿಯವರೆಗಿನ ಸುಮಾರು 9 ಗ್ರಾಮಗಳಿಗೆ ಸೇರಿದ ಗ್ರಾಮ ದೇವಿಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿರುತ್ತದೆ. ಪ್ರಸ್ತುತ ಊರಿನ ಸಮಸ್ತ ಭಕ್ತರ ಶ್ರೇಯಸ್ಸಿಗಾಗಿ ಹಾಗೂ ಶ್ರೀ ಚಾಮುಂಡೇಶ್ವರಿಯ ಕ್ಷೇತ್ರ ವರ್ಚಸ್ಸು ವೃದ್ಧಿಗಾಗಿ ಶ್ರೀ ಗಡಿಚಾಮುಂಡಿ ಅಮ್ಮನವರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.21ರಿಂದ 24ರವರೆಗೆ ಜರುಗಲಿದೆ.

ಆಡಳಿತ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ್ ಮೊಡೆತ್ತಾಯ, ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ನೆಲ್ಲಿತ್ತಾಯ, ಗೌರವ ಸಲಹೆಗಾರ ಹರೀಶ್ ಪೂಂಜ, ಅಧ್ಯಕ್ಷ ಪರಮೇಶ್ವರ ಗೌಡ ಮಂಡೆಕರ, ಉಪಾಧ್ಯಕ್ಷ ಹರೀಶ್ ಹೊಳೆಗಂಡಿ, ಕಾರ್ಯದರ್ಶಿ ಕೆ.ಧರ್ಮಪಾಲ, ಉಪಕಾರ್ಯದರ್ಶಿ ಪುನೀತ್ ದೇನೋಡಿ, ಕೋಶಾಧಿಕಾರಿ ಮಾಧವ ಪೂಜಾರಿ ದೇನೋಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಸಲಹೆಗರಾರು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here