


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ‘ಸಿರಿ ಕ್ಲಬ್’ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಿರಿ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾ.10ರಂದು ಉಜಿರೆ ಸಿರಿ ಕೇಂದ್ರ ಕಚೇರಿಯಲ್ಲಿ ಜರುಗಿತು.
ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ ಮೋಗರಾಜ್ ರವರು ದೀಪ ಪ್ರಜ್ವಲಿಸಿ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ ಸಿರಿ ಎಂ.ಡಿ ಶ್ರೀಯುತ ಕೆ.ಎನ್ ಜನಾರ್ಧನರವರ ಮಾರ್ಗದರ್ಶನದಲ್ಲಿ ಸಿರಿ ಕ್ಲಬ್ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವುದು ಅತ್ಯುತ್ತಮ ವಿಚಾರವಾಗಿದೆ.ಈ ಶಿಬಿರದಿಂದ ಸಿರಿ ಸಂಸ್ಥೆಯಲ್ಲಿ ದುಡಿಯುವ ನೂರಾರು ಮಹಿಳಾ ಸಿಬ್ಬಂದಿಗಳು ಹಾಗೂ ಅವರುಗಳ ಕುಟುಂಬದವರಿಗೆ ಬಹಳಷ್ಟು ಪ್ರಯೋಜನವಾಗಿದೆ.

ಹಲವು ಮಹಿಳೆಯರು ತಮ್ಮ ನಿತ್ಯ ಜೀವನದಲ್ಲಿ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಗುಪ್ತವಾಗಿಡುವುದರಿಂದ ಅದು ಮುಂದಕ್ಕೆ ಉಲ್ಬಣಗೊಂಡು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಸಂಭವವಿದೆ. ಇದಕ್ಕಾಗಿಯೇ ಸಿರಿ ಸಿಬ್ಬಂದಿಗಳ ಮೇಲೆ ವಿಶೇಷ ಕಾಳಜಿ ಹೊಂದಿರುವ ಸಿರಿ ಎಂಡಿಯವರ ಮನವಿಗೆ ಓಗೊಟ್ಟು ಸಿರಿ ಕ್ಲಬ್ ಮತ್ತು ಎಸ್.ಡಿ.ಎಂ ಆಸ್ಪತ್ರೆಯಲ್ಲಿರುವ ತಜ್ಞ ಮಹಿಳಾ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ಈ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು ಎಲ್ಲರೂ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸುವ ಮುಖಾಂತರ ಶಿಬಿರದ ಸದುಪಯೋಗವನ್ನು ಪಡೆದು ಆರೋಗ್ಯವಂತರಾಗಿ ಬಾಳಿ ಎಂದು ಶುಭ ಹಾರೈಸಿದರು.


ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ಧನರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಓರ್ವ ಮಹಿಳೆ ಆರೋಗ್ಯವಾಗಿದ್ದಲ್ಲಿ.ಆಕೆಯ ಕುಟುಂಬ ಪರಿವಾರವೂ ಉತ್ತಮ ಆರೋಗ್ಯಪೂರ್ಣ ವಾತಾವರಣವನ್ನು ಹೊಂದಲು ಸಾಧ್ಯ.

ಯಾವುದೇ ಖಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೆ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ಮುಂದಾಗುವ ಬಾರಿ ಅನಾಹುತವನ್ನು ತಪ್ಪಿಸಬಹುದಾಗಿದೆ. “ಸಂಸಾರ ಗುಟ್ಟು, ವ್ಯಾಧಿ ರಟ್ಟು” ಅನ್ನೋ ನಾಣ್ಣುಡಿಯಂತೆ ನಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡಲ್ಲಿ ಅದನ್ನು ಗೌಪ್ಯವಾಗಿಡದೆ ಸಕಾಲದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವುದರಿಂದ ನಮ್ಮ ಅತ್ಯಮೂಲ್ಯ ಜೀವವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಈ ಸದುದ್ದೇಶದಿಂದ ವಿಶ್ವ ಮಹಿಳಾ ದಿನಾಚರಣೆಯ ವಿಶೇಶಾರ್ಥವಾಗಿ ಪೂಜ್ಯರು ಹಾಗೂ ಮಾತೃಶ್ರೀ ಅಮ್ಮನವರ ಆಶ್ರಯದಲ್ಲಿ ನಡೆಯುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ನೂರಾರು ಮಹಿಳೆಯರು ಹಾಗೂ ಅವರ ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡಿದ ಎಸ್.ಡಿ.ಎಂ ಆಸ್ಪತ್ರೆಯ ಎಂ.ಡಿ ಜನಾರ್ಧನ, ವೈದ್ಯರುಗಳು ಮತ್ತು ಸಿಬ್ಬಂದಿಗಳ ತಂಡಕ್ಕೆ ಹಾಗೂ ಸಿರಿ ಕ್ಲಬ್ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಎಸ್.ಡಿ.ಎಂ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ಅನ್ವಿತಾ, ಸಿರಿ ಕ್ಲಬ್ ಅಧ್ಯಕ್ಷೆ ವಸಂತಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಿರಿ ಸಿಬ್ಬಂದಿಗಳ ಆರೋಗ್ಯ ತಪಾಸಣಾ ಕಾರ್ಯದಲ್ಲಿ ಸಹಕರಿಸಿದ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳಿಗೆ ಸಿರಿ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಸಿರಿ ಆಡಳಿತ ನಿರ್ದೇಶಕ ಪ್ರಸನ್ನ ರವರು ಸ್ವಾಗತಿಸಿ, ಗೋದಾಮು ಪ್ರಬಂಧಕ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.ಸುಮಾರು 136 ಮಂದಿ ಸಿರಿ ಮಹಿಳಾ ಸಿಬ್ಬಂದಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.









