ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವನಾಥ ಪಿ ಅವರಿಗೆ ಉನ್ನತ ಶಿಕ್ಷಣದ ಕಾಲೇಜು ಮತ್ತು ತಂತ್ರಜ್ಞಾನ ಶಿಕ್ಷಣ ಇಲಾಖೆಯು ಯು.ಜಿ.ಸಿ ನಿಯಮಗಳಿಗೆ ಅನುಗುಣವಾಗಿ ಪ್ರಾಧ್ಯಾಪಕ ಹುದ್ದೆಯ ವೃತ್ತಿ ಪದೋನ್ನತಿ ನೀಡಿ ಗೌರವಿಸಿದೆ.
ಡಾ.ವಿಶ್ವನಾಥ ಪಿ ಅವರ ಬೋಧನೆ, ಸಂಶೋಧನೆ ಮತ್ತು ವೃತ್ತಿ ನಿರ್ವಹಣೆಯ ವಿಶೇಷ ನೈಪುಣ್ಯತೆಯನ್ನು ಪರಿಗಣಿಸಿ ಈ ಪ್ರಾಧ್ಯಾಪಕ ಹುದ್ದೆಯ ವೃತ್ತಿ ಪದೋನ್ನತಿ ನೀಡಲಾಗಿದೆ.
ಮಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕರ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಅನುದಾನಿತ ಕಾಲೇಜುಗಳ ಬೋಧಕ ವಲಯದಲ್ಲಿ ಪ್ರಪ್ರಥಮ ಬಾರಿಗೆ ಪ್ರಾಧ್ಯಾಪಕ ಹುದ್ದೆಯ ಪದೋನ್ನತಿ ಪಡೆದ ಮೊದಲಿಗರಾಗಿದ್ದಾರೆ.ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ವೃತ್ತಿ ಸಂಭ್ರಮ’ ಶೀರ್ಷಿಕೆಯಡಿ ಏರ್ಪಟ್ಟ ಅಭಿನಂದನಾ ಸಮಾರಂಭದಲ್ಲಿ ಡಾ.ವಿಶ್ವನಾಥ ಪಿ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಸುಧಾಕರ್ ಗೌರವಿಸಿ ಅಭಿನಂದಿಸಿದರು.
ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕ ಶ್ರೀಧರ್ ಎಂ.ಎಸ್. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್, ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಟಿ.ಆರ್.ಶೋಭಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಳೆದ ಐದು ವರ್ಷಗಳಿಂದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ವಿಶ್ವನಾಥ್ ಪಿ ಅವರು ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ.
ರಸಾಯನಶಾಸ್ತ್ರ ವಲಯದ ಶೈಕ್ಷಣಿಕ ಮತ್ತು ಸಂಶೋಧನಾ ಸಾಧ್ಯತೆಗಳನ್ನು ವಿಸ್ತರಿಸುವಲ್ಲಿ ನೀಡಿದ ಕೊಡುಗೆಗಳು ಮಹತ್ವಪೂರ್ಣವೆನ್ನಿಸಿವೆ.